ಹಾಸನ: ಡಕಾಯಿತಿ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುವ ವೇಳೆ ಆರೋಪಿಯೊಬ್ಬ ಸಾವಿಗೀಡಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಅವಿನಾಶ್ (26) ಎಂಬಾತ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಠಾಣೆಯಲ್ಲಿ ಹೃದಯಾಘಾತವಾಗಿ ಈತ ಮೃತಪಟ್ಟ ಎಂದು ಪೊಲೀಸರು ಹೇಳುತ್ತಿದ್ದರೆ, ಆತನ ಪೋಷಕರು ಇದು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ.
ಏನಿದು ಘಟನೆ?
ಡಕಾಯಿತಿ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿ ಜತೆ ಅವಿನಾಶ್ನನ್ನೂ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆಗೆ ಕರೆದು ತಂದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಅವಿನಾಶ್ ಮೃತಪಟ್ಟಿದ್ದಾನೆ ಎಂದು ಸ್ಥಳೀಯರ ಮೂಲಕ ಪೋಷಕರಿಗೆ ಗೊತ್ತಾಗಿದೆ. ಸುದ್ದಿ ತಿಳಿದು ಠಾಣೆಗೆ ಬಂದು ನೋಡಿದಾಗ ಅವಿನಾಶ್ ಸಾವಿಗೀಡಾಗಿದ್ದು ದೃಢಪಟ್ಟಿದೆ.
ಈ ಸುದ್ದಿ ಹರಡುತ್ತಿದ್ದಂತೆ ಪೊಲೀಸ್ ಠಾಣೆಯ ಮುಂದೆ ಸಾವಿರಾರು ಮಂದಿ ಜಮಾಯಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ನಾಲ್ವರು ಜಿಲ್ಲಾ ಮೀಸಲು ಪೊಲೀಸರನ್ನು ಗ್ರಾಮದಲ್ಲಿ ನಿಯೋಜನೆ ಮಾಡಲಾಗಿದೆ.