ಹಾಸನ: ಮಂಡ್ಯ ಜಿಲ್ಲೆ ನಾಗಮಂಗಲದ ಕೊರೊನಾ ಪಾಸಿಟಿವ್ ಪಿ-505 ವ್ಯಕ್ತಿ ಜೊತೆ ಸಂಪರ್ಕ ಹೊಂದಿದ್ದ ಚನ್ನರಾಯಪಟ್ಟಣ ಮೂಲದ ವ್ಯಕ್ತಿ ಸೇರಿ 8 ಮಂದಿಯ 2ನೇ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್ ತಿಳಿಸಿದ್ದಾರೆ.
ಕಳೆದ ತಿಂಗಳು ಮುಂಬೈನಿಂದ ಬಂದಿದ್ದ ನಾಗಮಂಗಲ ವ್ಯಕ್ತಿ ಜೊತೆಗೆ ಚನ್ನರಾಯಪಟ್ಟಣದ ವ್ಯಕ್ತಿ ಸಹ ಪ್ರಯಾಣಿಸಿದ್ದ. ಈತನೊಂದಿಗೆ 8 ಮಂದಿ ಪಿ- 505 ಜೊತೆ ನೇರ ಸಂಪರ್ಕ ಹೊಂದಿದ್ದರು. ಕೂಡಲೇ ಅವರನ್ನು ಪತ್ತೆ ಹಚ್ಚಿ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಮಂಗಳವಾರ ಮತ್ತೆ ಎಲ್ಲರನ್ನೂ ಪರೀಕ್ಷೆಗೊಳಪಡಿಸಿದ ನಂತರ ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದರು.
ಪಿ-505 ಜೊತೆ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದವರ ವರದಿ ಬುಧವಾರ ಬರಲಿದೆ. ಆದರೆ, ದಾವಣಗೆರೆಯಲ್ಲಿ ಪಾಸಿಟಿವ್ ಬಂದಿರುವ ವ್ಯಕ್ತಿಯೊಬ್ಬ ಅರಸೀಕೆರೆ ತಾಲೂಕಿನ ಜಾವಗಲ್‌ಗೆ ಬಂದು ಹೋಗಿದ್ದಾನೆ ಅನ್ನೋ ಮಾಹಿತಿ ಹೊರ ಬಿದ್ದಿರುವುದು ಮತ್ತೊಂದು ಆತಂಕ್ಕೆ ಕಾರಣವಾಗಿದೆ. ಆತನ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದರು.