ಹಾಸನ: ಇವುಗಳು ಹುಟ್ಟಿ, ಇನ್ನೂ ತಿಂಗಳು ಕಳೆದಿಲ್ಲ. ಈ ಮುದ್ದಾದ ಪುಟ್ಟ ಪುಟ್ಟ ಕರುಗಳನ್ನು ಜನ್ಮ ನೀಡಿದ ತಾಯಿಯ ಮಾಲೀಕರು ಕಟುಕರ ಕೈಗೆ ಕೊಟ್ಟುಬಿಟ್ಟಿದ್ದಾರೆ. ಅದೃಷ್ಟವಶಾತ್ ಇವುಗಳ ಲಕ್ ಚೆನ್ನಾಗಿತ್ತು. ಕಟುಕರ ಕೈಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿವೆ.
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಸುಮಾರು 60 ಹೋರಿ ಕರುಗಳನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಇಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿ ಈ ಕರುಗಳಿವೆ.
ಜಾನುವಾರು ವ್ಯಾಪಾರದ ನೆಪದಲ್ಲಿ ಕಸಾಯಿ ಖಾನೆಗೆ ರವಾನೆ...
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಸಂತೆಯ ಹಿಂದಿನ ದಿನವಾದ ನಿನ್ನೆ ದನಗಳ ವ್ಯಾಪಾರ ನಡೆಯುತ್ತೆ. ಕೊಳ್ಳುವ ಹಾಗೂ ಮಾರುವ ಪ್ರಕ್ರಿಯೆ ನಡೆಯುತ್ತದೆ. ನಿನ್ನೆ ಬಹಳ ಜೋರಾಗಿಯೇ ದನಗಳ ವ್ಯಾಪಾರವಾಗಿದೆ. ಕೆಲವು ರೈತರು ಜಾನುವಾರುಗಳ ವ್ಯಾಪಾರದ ಜೊತೆಗೆ ಹಣದ ಆಸೆಗೆ ಬಿದ್ದು, ಹುಟ್ಟಿ ತಿಂಗಳೂ ಕಳೆಯದ ಪುಟ್ಟ ಪುಟ್ಟ ಮುದ್ದಾದ ಹೋರಿ ಕರುಗಳನ್ನು ಒಂದಿಷ್ಟು ಹಣಕ್ಕೆ ಕಟುಕರಿಗೆ ಮಾರಿದ್ದು, ನಿಜಕ್ಕೂ ಕರುಳು ಹಿಂಡುವಂತ ವಿಚಾರ. ಅಷ್ಟೇ ಅಲ್ಲದೇ ಗೋ - ಹತ್ಯೆ ನಿಷೇಧ ಜಾರಿಯಾಗಿದ್ರೂ ಕೆಲ ಕಟುಕರು ಗೋ - ಮಾಂಸಕ್ಕಾಗಿ ಹಸು, ಎಮ್ಮೆ, ಹೋರಿ ಕರುಗಳನ್ನ ಕಡಿಮೆ ಬೆಲೆಗೆ ವ್ಯಾಪಾರ ಮಾಡಿ ಕಸಾಯಿಖಾನೆಗೆ ಕಳುಹಿಸುತ್ತಿರುವುದು ನಿಜಕ್ಕೂ ದುರಂತ.
60 ಹೋರಿ ಕರುಗಳ ರಕ್ಷಣೆ...
ಕೆ.ಎ. 42. ಎ.8193 ಎಂಬ ವಾಹನದಲ್ಲಿ ಹೆಚ್ಚು ಕಡಿಮೆ 10-15 ಕರುಗಳನ್ನ ತುಂಬಬಹುದು. ಆದರೆ ಅಂತಹ ಚಿಕ್ಕ ವಾಹನದಲ್ಲಿ ಸರಿ ಸುಮಾರು 60 ಹೋರಿಕರುಗಳ ಕಾಲುಗಳನ್ನ ಒಂದಕ್ಕೊಂದು ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ತುಂಬಿಕೊಂಡು ಚನ್ನರಾಯಪಟ್ಟಣದ ಸಂತೆಯಿಂದ ಕೇರಳದ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಸ್ಥಳೀಯರು ವಾಹನ ತಡೆದು ಅವುಗಳನ್ನ ರಕ್ಷಣೆ ಮಾಡಿದ್ದಾರೆ.
ಚನ್ನರಾಯಪಟ್ಟಣ ಮಾರುಕಟ್ಟೆಯಲ್ಲಿ ದನಗಳ ಸುಂಕವನ್ನು ನಿಷೇಧಿಸಿ ಹಲವು ವರ್ಷಗಳೇ ಕಳೆದಿದ್ದರೂ, ಕೆಲವು ಸಂಘಟನೆಗಳ ಮುಖಂಡರು ಮಾತ್ರ ಜಾನುವಾರುಗಳ ಸಂತೆಗೆ ಬರುವ ಹಸು, ಎತ್ತು ಮತ್ತು ಕರುಗಳಿಗೆ ಇಂತಿಷ್ಟು ಹಣ ಪಾವತಿ ಮಾಡಬೇಕು ಎಂದು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಹಣ ನೀಡದಿದ್ದರೇ ಕಸಾಯಿ ಖಾನೆಗೆ ಮಾರಾಟ ಮಾಡುತ್ತಿರುವುದಾಗಿ ದೂರು ನೀಡುತ್ತೇವೆ ಎಂದು ಬೆದರಿಕೆ ಒಡ್ಡುವ ಆರೋಪಗಳು ಕೇಳಿ ಬರುತ್ತಿವೆ.