ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಮನೋಹರ್ ಸೇವಾ ಟ್ರಸ್ಟ್ ವತಿಯಿಂದ ಕೊರೊನಾ ಸೋಂಕಿತರ ಸೇವೆಗೆ 4 ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಈ ಆ್ಯಂಬುಲೆನ್ಸ್ಗಳಿಗೆ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ವಿನಯ್ ಗುರೂಜಿ, ಸರ್ಕಾರವೇ ಎಲ್ಲಾ ಮಾಡುತ್ತೆ ಎಂದು ಕುಳಿತರೆ ಸಾಲದು. ನಾವುಗಳು ಈ ಸಂದರ್ಭದಲ್ಲಿ ಸರ್ಕಾರವಾಗಿ ಕೆಲಸ ಮಾಡಿದಾಗ ಕೊರೊನಾ ನಿಯಂತ್ರಿಸಲು ಸಾಧ್ಯ. ದಯಮಾಡಿ 1 ಲಕ್ಷಕ್ಕೂ ಅಧಿಕ ಸಂಬಳ ಪಡೆಯುತ್ತಿರುವ ನೌಕರರು ಕನಿಷ್ಠ 10 ಸಾವಿರ ರೂ.ಗಳನ್ನು ಸರ್ಕಾರದ ತುರ್ತು ಪರಿಸ್ಥಿತಿಗಾಗಿ ಬಳಸಿಕೊಳ್ಳಲು ನೀಡಿದರೆ ನಿಜಕ್ಕೂ ನಮ್ಮ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದರು.
ಕೋವಿಡ್ ಎಂಬ ಹೆಮ್ಮಾರಿ ಮುಂದಿನ ದಿನದಲ್ಲಿ ರಾಕ್ಷಸ ರೂಪ ತಾಳುತ್ತೆ ಅಂತ ನಾನು ಮೊದಲೇ ಹೇಳಿದ್ದೆ. ನಾವು ಪರಿಸರವನ್ನು ಹಾಳು ಮಾಡಿರುವ ಪ್ರತಿಫಲವೇ ಇಂದು ನಮಗೆ ಮುಳುವಾಗಲಿದೆ. ನಾವು ತಿನ್ನುವಂತಹ ಆಹಾರ ಪದಾರ್ಥ ಕೂಡಾ ರಾಸಾಯನಿಕಯುಕ್ತವಾಗಿದೆ. ನಾವು ಕ್ಷಣಿಕ ಸುಖಕ್ಕಾಗಿ ಎಲ್ಲಾ ಹಾಳು ಮಾಡಿದೆವು. ಇನ್ನಾದ್ರು ನಾವು ಬದಲಾಗೋಣ. ಬದಲಾಗದಿದ್ದರೆ ಮುಂದೆ ನಮ್ಮ ಮಕ್ಕಳು ಬದುಕುವುದು ಕಷ್ಟಸಾಧ್ಯ ಎಂದರು.
ಮನೋಹರ್ ಸೇವಾ ಟ್ರಸ್ಟ್ ಮುಖ್ಯಸ್ಥ ಮನೋಹರ್ ಕುಂಭೇನಳ್ಳಿ ಮಾತನಾಡಿ, ಲಾಕ್ಡೌನ್ ಸಮಯದಲ್ಲಿ ಹಲವರು ಹಸಿವಿನಿಂದ ನರಳುತ್ತಿದ್ದಾರೆ. ಇನ್ನೂ ಕೆಲವರು ಕೋವಿಡ್ ಸೋಂಕು ತಗುಲಿದ ಬಳಿಕ ಸರಿಯಾದ ಸಮಯಕ್ಕೆ ತುರ್ತು ವಾಹನಗಳು ಸಿಗದೇ ಸಾವನ್ನಪ್ಪುತ್ತಿದ್ದಾರೆ. ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಬೆಳ್ಳೂರು ಕ್ರಾಸ್, ಹಾಸನ ತಾಲೂಕಿನ ಗ್ರಾಮೀಣ ಭಾಗದ ಜನರು ಸೂಕ್ತ ಸಮಯದಲ್ಲಿ ಆ್ಯಂಬುಲೆನ್ಸ್ ಸಿಗದೇ ಪರದಾಡುತ್ತಿದ್ದಾರೆ. ಹೀಗಾಗಿ, ಉಚಿತ ವಾಹನ ನೀಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ 9 ಸಾವಿರ ಜನರಿಗೆ ತಗುಲಿದ ಕೋವಿಡ್: ಪ್ರತಿ 100ರಲ್ಲಿ 34 ಮಂದಿಗೆ ಸೋಂಕು