ಹಾಸನ: ನಾಳೆಯಿಂದ ಬಹುತೇಕ ರಾಜ್ಯದಲ್ಲಿ ವಿವಿಧ ಜಿಲ್ಲೆಗಳು ಅನ್ಲಾಕ್ ಆಗುತ್ತಿವೆ. ಆದರೆ ಜಿಲ್ಲೆಯಲ್ಲಿ ಮಾತ್ರ ಮತ್ತೆ 15 ದಿನಗಳ ಲಾಕ್ಡೌನ್ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಹಾಸನದಲ್ಲಿ ದಿನದಿಂದ ದಿನಕ್ಕೆ ಪಾಸಿಟಿವಿಟಿ ರೇಟ್ ಕಡಿಮೆಯಾದ್ರೂ ಶೇ.5ಕ್ಕಿಂತ ಕಡಿಮೆ ಬಾರದ ಹಿನ್ನಲೆ ಜಿಲ್ಲಾಡಳಿತ ಮತ್ತು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಭಾನುವಾರ ಕೂಡಾ ಹಾಸನದಲ್ಲಿ 375 ಮಂದಿಗೆ ಸೋಂಕು ತಗಲಿದ್ದು, ಪಾಸಿಟಿವಿಟಿ ರೇಟ್ 7.54 ಇರುವುದರಿಂದ ಜಿಲ್ಲೆಯಲ್ಲಿ ಮತ್ತೆ 15 ದಿನಗಳ ಕಾಲ ಲಾಕ್ಡೌನ್ ಮುಂದುವರೆಸಲಾಗಿದೆ.
ಜಿಲ್ಲೆಯಲ್ಲಿ ಸುಮಾರು 28ಕ್ಕೂ ಅಧಿಕ ಸಿಸಿಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸೋಮವಾರದಿಂದ ವಾರದಲ್ಲಿ ಮೂರು ದಿನಗಳು ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ 6 ರಿಂದ 2 ಗಂಟೆಯ ತನಕ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ್ದು, ಇನ್ನುಳಿದ 4 ದಿನಗಳು ಅಂದರೆ ಮಂಗಳವಾರ, ಗುರುವಾರ ಹಾಗೂ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ಡೌನ್ ಇರುತ್ತದೆ.
ಸೋಮವಾರದಿಂದ ವೈದ್ಯಕೀಯ ಸೇವೆ, ನ್ಯಾಯಬೆಲೆ ಅಂಗಡಿ, ರೈತ ಸಂಪರ್ಕ ಮತ್ತು ಹಾಲಿನ ಡೈರಿಗಳು ಬೆಳಗ್ಗೆ 6 ರಿಂದ 2 ಗಂಟೆಯತನಕ ಕಾರ್ಯನಿರ್ವಹಿಸಿದ್ರೆ, ಬ್ಯಾಂಕ್ ಮತ್ತು ವಿಮಾ ಯೋಜನೆಗಳ ವ್ಯವಹಾರಗಳು ವಾರದ ಮೂರು ದಿನದಲ್ಲಿ ಬೆಳಗ್ಗೆ 8 ರಿಂದ 1 ಗಂಟೆಯ ತನಕ ಕಾರ್ಯ ನಿರ್ವಹಿಸಲಿದೆ. ಇನ್ನುಳಿದ ವಾರಗಳಲ್ಲಿಯೂ ಬ್ಯಾಂಕ್ ಅಂಚೆ ಕಚೇರಿ ಹಾಗೂ ಬ್ಯಾಂಕ್ ಕಚೇರಿಗಳು ಲಾಕ್ ಆಗಲಿವೆ.
ಇನ್ನು ರಸಗೊಬ್ಬರ, ಕೀಟನಾಶಕ ಮಾರಾಟ ಮಳಿಗೆ, ಕೃಷಿಯಂತ್ರೋಪಕರಣ ಮಳಿಗೆ ತೆರೆಯಬಹುದು. ಉದ್ಯಾನವನದಲ್ಲಿ ಬೆಳಗ್ಗೆ 5 ರಿಂದ 10 ಗಂಟೆಯತನಕ ಮತ್ತು ಟ್ಯಾಕ್ಸಿ ಮತ್ತು ಆಟೋಗಳಲ್ಲಿ ಗರಿಷ್ಠ 2 ಮಂದಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಅಲ್ಲದೇ ಉತ್ಪಾದನ ಘಟಕಗಳು/ಕೈಗಾರಿಕೆಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಬಳಸಿಕೊಂಡು ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿದೆ.
ಒಟ್ಟಾರೆ ದಿನದಿಂದ ದಿನಕ್ಕೆ ಕಡಿಮೆಯಾಗಬೇಕಿದ್ದ ಕೊರೊನಾ ಮಂದಗತಿಯಲ್ಲಿ ಸಾಗುತ್ತಿದ್ದು, ಕೇವಲ 2ರಷ್ಟು ಪಾಸಿಟಿವಿಟಿ ರೇಟ್ ಕಡಿಮೆಯಾದ್ರೆ, ಮುಂದಿನ ವಾರವೇ ಲಾಕ್ಡೌನ್ ಅನ್ನು ಜಿಲ್ಲಾಡಳಿತ ಓಪನ್ ಮಾಡಬಹುದು. ಆದ್ರೆ ಸಾರ್ವಜನಿಕರು ಇದಕ್ಕೆ ಸಹಕಾರ ಮಾತ್ರ ಅತ್ಯವಶ್ಯಕ.
ಓದಿ: ಸಿಎಂ ಭೇಟಿಯಾದ ಅವಧೂತ: 3ನೇ ಅಲೆ ಬಗ್ಗೆ ಎಚ್ಚರ ಎಂದ ವಿನಯ್ ಗುರೂಜಿ