ಉಡುಪಿ: ಜಿದ್ದಾ ಜಿದ್ದಿನ ಸ್ಪರ್ಧಾ ಕಣವಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿದ್ದರು.
ಸ್ವ-ಪಕ್ಷೀಯರ ಗೋ ಬ್ಯಾಕ್ ವಿರೋಧದ ನಡುವೆ 2ನೇ ಬಾರಿ ಲೋಕಸಭಾ ಅಭ್ಯರ್ಥಿಯಾಗಿ ಶೋಭಾ ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಶೋಭಾ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿ ಬಳಿ ನಡೆದ ಕಾರ್ಯಕರ್ತರ ವಿಜಯ ಸಂಕಲ್ಪ ಸಮಾವೇಶದಲ್ಲಿ ರಾಜ್ಯದ ಹಲವು ನಾಯಕರು ಭಾಗವಹಿಸಿದ್ದರು. ನಾಮಪತ್ರ ಸಲ್ಲಿಕೆಗೆ ಮುನ್ನ ಶೋಭಾ ಶ್ರೀ ಕೃಷ್ಣ ಮುಖ್ಯಪ್ರಾಣ ಅನಂತೇಶ್ವರ ಚಂದ್ರ ಮೌಳೀಶ್ವರ ದೇವರ ದರ್ಶನ ಪಡೆದರು.ಶೊಭಾ ಜೊತೆಗಿದ್ದ ನಿರ್ಮಲಾ ಸೀತರಾಮನ್ ಪರ್ಯಾಯ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಚನ ಪಡೆದರು. ಇದೇ ಸಂದರ್ಭದಲ್ಲಿ ಮುಂದಿನ ಅವಧಿಗೂ ಮೋದಿಯವರೇ ಪ್ರಧಾನಿಯಾಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲು ವಿನಂತಿಸಿದರು.
ಶೋಭಾ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಮೀನುಗಾರ ಮುಖಂಡರ ಜೊತೆ ಚರ್ಚೆ ನಡೆಸಿದ್ರು. ಬಳಿಕ ಡಿಸೆಂಬರ್ ತಿಂಗಳಲ್ಲಿ ಕಾಣೆಯಾದ ಮೀನುಗಾರರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶೋಭಾ ಕರಂದ್ಲಾಜೆ ‘ಚುನಾವಣೆ ಯುದ್ಧವಿದ್ದಂತೆ, ಬಿಜೆಪಿ ಕಾರ್ಯಕರ್ತರು ಸೇನಾನಿಗಳಿದ್ದಂತೆ. ಯುದ್ಧ ಗೆಲ್ಲುವ ವಿಶ್ವಾಸ ಇದೆ ಎಂದರು. ರಾಜ್ಯದಲ್ಲಿ 23ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ. ರಾಜ್ಯದ ಮತದಾರರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.