ಗದಗ : ಪ್ರವಾಹ ಪೀಡಿತ ಗ್ರಾಮದಲ್ಲಿ ಸುಡುವ ಚಿತೆಯ ಮುಂದೆ ವ್ಯಕ್ತಿಯೊಬ್ಬ ನಿಂತು ಗ್ರಾಮದ ಸಮಸ್ಯೆ ತೋಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ರಸ್ತೆ ಸಂಪರ್ಕ ಸರಿಯಾಗಿಲ್ಲದ್ದರಿಂದ ಆ್ಯಂಬುಲೆನ್ಸ್ ಬಾರದೇ ವೃದ್ಧೆ ಶೆಟ್ಟವ್ವ ಮಾದಾರ್ (65) ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರೋಣ ಕೊಣ್ಣೂರು ಸಂಪರ್ಕ ಕಲ್ಪಿಸೋ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಶೆಟ್ಟವ್ವಳಿಗೆ ನಿನ್ನೆ ಹೃದಯ ಸಮಸ್ಯೆ ಕಾಣಿಸಿಕೊಂಡಾಗ ಗ್ರಾಮಸ್ಥರು 108 ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ, ಸರಿಯಾದ ರಸ್ತೆ ಸಂಪರ್ಕವಿರದ ಕಾರಣ ಗ್ರಾಮಕ್ಕೆ ಆ್ಯಂಬುಲೆನ್ಸ್ ಬರಲಾಗಿಲ್ಲ. ಹೀಗಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದ ಕಾರಣ ಶೆಟ್ಟವ್ವ ಮೃತಪಟ್ಟಿದ್ದಾಳೆಂದು ಗ್ರಾಮಸ್ಥರು ಆರೋಪಿಸ್ತಿದ್ದಾರೆ. ಮೆಣಸಗಿ ಗ್ರಾಮವು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ಅವರ ಕ್ಷೇತ್ರ ನರಗುಂದ ವ್ಯಾಪ್ತಿಗೆ ಬರುತ್ತದೆ. ಈಗಾಗ್ಲೇ ಸಚಿವರೂ ಸಹ ಗ್ರಾಮದ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ಸಮಸ್ಯೆ ಸರಿಪಡಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಹಾಗೂ ರಾಜಕೀಯ ನಾಯಕರಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.