ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಅಮಾವಾಸ್ಯೆ ಪೂಜೆಗೆ ಎಂದು ಕಾರು ತೊಳೆಯಲು ಕಾಲುವೆಗೆ ಹೋಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದು, ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.
ಅರುಣ್ ಪಡೆಸೂರ (25) ಹಾಗೂ ಹನುಮಂತ ಮಜ್ಜಿಗೆ (30) ನಾಪತ್ತೆಯಾದ ಯುವಕರು. ಯುವಕರು ಮಲಪ್ರಭಾ ನದಿಯ ಕಾಲುವೆಗೆ ಕಾರು ಸ್ವಚ್ಛಗೊಳಿಸಲು ತೆರಳಿದ್ದರು. ಅವರ ಕಾರು ಕಾಲುವೆಯ ಪಕ್ಕದಲ್ಲೇ ಇದೆ. ಆದರೆ, ಯುವಕರಿಬ್ಬರು ನಾಪತ್ತೆಯಾಗಿದ್ದು, ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕಾರು ತೊಳೆಯಲು ನೀರು ತರಲೆಂದು ಇಳಿದ ವೇಳೆ ಒಬ್ಬಾತ ಜಾರಿ ಬಿದ್ದು, ಇನ್ನೊಬ್ಬ ಆತನ ರಕ್ಷಣೆಗೆಂದು ಹೋಗಿ ನೀರು ಪಾಲಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರ ಪತ್ತೆಗಾಗಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಸಹೋದರಿಯರೂ ನೀರುಪಾಲು!