ಗದಗ: ಜೂನ್ 2 ರಂದು ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದ, ಗದಗ-ಮುಂಬೈ ಎಕ್ಸ್ಪ್ರೆಸ್ ರೈಲು ಇಬ್ಬರು ಕೊರೊನಾ ಸೋಂಕಿತರನ್ನು ಹೊತ್ತು ತಂದಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಗದಗಕ್ಕೆ ಮೊದಲ ಬಾರಿಗೆ ಆಗಮಿಸಿದ ಮುಂಬೈ-ಗದಗ ಎಕ್ಸ್ಪ್ರೆಸ್ ರೈಲು ಸುಮಾರು 124 ಜನರನ್ನ ಹೊತ್ತು ತಂದಿತ್ತು. ಅವರೆಲ್ಲರನ್ನೂ ಜಿಲ್ಲೆಯ ವಿವಿಧ ಕಡೆ ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಲಾಡ್ಜ್ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ದಂಪತಿಗೆ ಸೋಂಕು ಇರುವುದು ದೃಢಪಟ್ಟಿದೆ.
ರೋಗಿ- 5383, 59 ವರ್ಷದ ವ್ಯಕ್ತಿ ಹಾಗೂ ರೋಗಿ- 5384, 49 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಮೂಲತಃ ಇವರು ಗದಗ ತಾಲೂಕಿನ ಮುಳಗುಂದ ಗ್ರಾಮದವರಾಗಿದ್ದು, ಮಗಳ ಮದುವೆಗೆಂದು ಇಲ್ಲಿಗೆ ಆಗಮಿಸಿದ್ದರು. ಈ ತಿಂಗಳ 15 ರಂದು ಮಗಳ ಮದುವೆ ಇದೆ.
ಇಬ್ಬರಿಗೂ ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗದಗದಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 26 ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನೂ 15 ಸೋಂಕಿತರು ಜಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.