ಗದಗ: ಜಿಲ್ಲೆಯ ರೋಣ ತಾಲೂಕಿನ ಮುದೇನಗುಡಿ ಗ್ರಾಮದಲ್ಲಿ ರೈತನೋರ್ವ ಸುಮಾರು ಐದು ಎಕರೆ ಜಮೀನಿನಲ್ಲಿ ಆ್ಯಪಲ್ ಬಾರಿ ಹಣ್ಣನ್ನು ಬೆಳೆದು ವರ್ಷಕ್ಕೆ 10 ರಿಂದ 12 ಲಕ್ಷ ರೂ. ಆದಾಯ ಗಳಿಸಿ, ಮಾದರಿಯಾಗಿದ್ದಾರೆ.
ಮುದೇನಗುಡಿ ಗ್ರಾಮದ ಜಗದೀಶ್ ಗೌಡ ಕ್ಯಾತನಗೌಡರ ಮಾದರಿ ರೈತ. ಇವರ ಜಮೀನು ಕೇವಲ 5 ಎಕರೆ ಮಾತ್ರ. ಆದರೆ ಇಷ್ಟೇ ಎಕರೆ ಜಮೀನಿನಲ್ಲಿ ವರ್ಷಕ್ಕೆ 10 ರಿಂದ 12 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. 30 ವರ್ಷಗಳ ಹಿಂದೆ ಯಾವ ಬೆಳೆ ಬೆಳೆಯದ 3 ಎಕರೆ ಜವಳು ಭೂಮಿಯನ್ನು ಖರೀದಿ ಮಾಡಿದ್ದ ಇವರು, ವಾಣಿಜ್ಯ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿದ್ದರು. ಬಳಿಕ ಚಿಂತೆಗೀಡಾಗಿದ್ದ ಇವರು ಕೃಷಿ ಇಲಾಖೆಗೆ ಭೇಟಿ ನೀಡಿ ಪರಿಹಾರ ಕಂಡುಕೊಂಡರು. ಅದೇ ಪರಿಹಾರ ಈಗ ಆ್ಯಪಲ್ ಬಾರಿ ಹಣ್ಣಿನ ಕೃಷಿಯಾಗಿದೆ.
ಮಹಾರಾಷ್ಟ್ರದಿಂದ ಸುಮಾರು 1,200 ಗಿಡಗಳನ್ನು ತಂದು ತೋಟಗಾರಿಕೆ ಬೆಳೆಯಾಗಿ ಕೃಷಿ ಆರಂಭಿಸಿದ್ದರು. ಮೊದಲನೇ ವರ್ಷದಲ್ಲಿ ಕೇವಲ 50 ರಿಂದ 60 ಸಾವಿರ ರೂ. ಮಾತ್ರ ಆದಾಯ ಬಂದಿತ್ತು. ಬಳಿಕ ವರ್ಷಗಳು ಉರುಳಿದಂತೆ ಅದರ ಆದಾಯ ದುಪ್ಪಟ್ಟು ಆಗಿದೆ ಎಂದು ರೈತ ಜಗದೀಶ್ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಇತಿಹಾಸದಲ್ಲೇ ಈ ಬೆಳೆಯನ್ನು ಯಾರೂ ಬೆಳೆದಿಲ್ಲ. ಏಕೆಂದರೆ ಇದಕ್ಕೆ ಈ ಭಾಗದಲ್ಲಿ ಒಂದು ಕಳಂಕ ಇದೆ. ಬಾರಿ ಗಿಡ ಅಂದರೆ ಅದೊಂದು ಅನಿಷ್ಟ. ಆ ಗಿಡ ಇದ್ದಲ್ಲಿ ಮಾಟ, ಮಂತ್ರ, ದೆವ್ವ, ಭೂತ ಎಂದು ಜನ ಮೂಢನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಈ ಗಿಡವನ್ನು ಹಿತ್ತಲದಲ್ಲಿ ಹುಟ್ಟಿದರೆ ಕಡಿದು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲೂ ಕೃಷಿ ಇಲಾಖೆಯವರು ನೀಡಿದ ಸಲಹೆಯಂತೆ ಧೈರ್ಯ ಮಾಡಿ, ಬಾರಿ ಹಣ್ಣಿನ ಕೃಷಿ ಮಾಡಿದ್ದಾರೆ. ಇದು ಅನಿಷ್ಟ ಬೆಳೆ ಎಂದಿದ್ದವರ ಮುಂದೆಯೇ ಬೆಳೆದು ತಾಲೂಕಿನ ಪ್ರಗತಿಪರ ರೈತ ಪ್ರಶಸ್ತಿ ಪಡೆದಿದ್ದಾರೆ.