ಗದಗ : ಅಧಿಕಾರ ಕಳೆದುಕೊಂಡಾಗಲೆಲ್ಲಾ ದೇಶಕ್ಕೆ ಬೆಂಕಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೆ ಸಿಎಎ ತಂದಾಗ ಕಾಂಗ್ರೆಸ್ ದೇಶಕ್ಕೆ ಬೆಂಕಿ ಇಡುವ ಕೆಲಸ ಮಾಡಿದೆ. ಡಿಜಿಹಳ್ಳಿ-ಕೆಜೆಹಳ್ಳಿ ಪ್ರಕರಣಗಳ ಹಿಂದೆಯೂ ಕಾಂಗ್ರೆಸ್ ಇತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಗುಂಡಾಗಿರಿ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದೆ. ಕಾಂಗ್ರೆಸ್ ಅಧ್ಯಕ್ಷರೊಬ್ಬರು ಭ್ರಷ್ಟಾಚಾರ ಕೇಸ್‌ನಲ್ಲಿ ಸಿಬಿಐ ವಶದಲ್ಲಿದ್ದಾರೆ. ಇನ್ನೊಬ್ಬ ಉತ್ತರ ಕರ್ನಾಟಕ ನಾಯಕ ಕ್ರಿಮಿನಲ್ ಕೇಸ್‌ನಲ್ಲಿ ಜೈಲಿನಲ್ಲಿದ್ದಾರೆ.
ಇನ್ನು ಮುಂದೆ ಗೂಂಡಾಗಿರಿ ನಡೆಯೋದಿಲ್ಲ. ಕಾಂಗ್ರೆಸ್ ಎಲ್ಲಾ ಕಡೆ ಬದುಕಲು ನಾಲಾಯಕ್ ಆಗಿದೆ. ರಾಜ್ಯ ಹಾಗೂ ದೇಶದ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಕಮಲ ಅರಳುತ್ತಿದೆ. ಬದಲಿಗೆ ಕಾಂಗ್ರೆಸ್ ಸ್ಥಾನ ಕಳೆದುಕೊಳ್ಳುತ್ತಿದೆ ಎಂದರು.
ಈಗೀಗ ನಮ್ಮ ಪಕ್ಷದಲ್ಲೂ ಕೆಲವರಿಗೆ ಹುಚ್ಚು ಹಿಡದಿದೆ. ಮಂತ್ರಿಗಳು, ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಮ್ಮ ಮನೆಗೂ ಅರ್ಜಿ ಹಿಡಿದುಕೊಂಡು ಅಲೆಯುತ್ತಿದ್ದಾರೆ. ನಿಗಮ ಮಂಡಳಿ ನೀಡಿ, ಆ ಹುದ್ದೆ ನೀಡಿ, ಈ ಜವಾಬ್ದಾರಿ ಕೊಡಿ ಅಂತಾ ಬರ್ತಾರೆ.
ಆದರೆ, ನೆನಪಿರಲಿ ಅರ್ಜಿ ನೋಡಿ ನಾವು ಸ್ಥಾನಮಾನ ನೀಡಲ್ಲ. ನಾವು ಮತಗಟ್ಟಿಯಲ್ಲಿ, ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಿದ್ದಾನೆ ಎಂಬುದನ್ನು ನೋಡಿ ಜವಾಬ್ದಾರಿ ನೀಡುತ್ತೇವೆ ಅಂತಾ ಅಧಿಕಾರ ದಾಹಿಗಳಿಗೆ ಬುದ್ಧಿ ಮಾತು ಹೇಳಿದರು.