ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತ್ತಗುಡ್ಡ ಅಪಾರ ಪ್ರಮಾಣದ ಸಸ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ಹೊಂದಿದೆ. ಆದರೆ, ಇಂತಹ ಅಪರೂಪದ ಸಸ್ಯ ಸಂಪತ್ತು ಬೆಂಕಿಯ ರುದ್ರನರ್ತನಕ್ಕೆ ಬೆಂದು ಹೋಗುತ್ತಿದ್ದು, ಹೀಗಾಗಿ ಅರಣ್ಯ ಇಲಾಖೆ ಬೆಂಕಿ ಹಚ್ಚುವವರ ವಿರುದ್ಧ ಸಮರ ಸಾರಿದೆ. ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಿದವರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಅಪಾರ ಪ್ರಮಾಣದ ಸಸ್ಯ ಸಂಪತ್ತು ಹೊಂದಿದೆ. ಇಂತಹ ಅಮೂಲ್ಯವಾದ ಸಂಪತ್ತಿಗೆ ಕೆಲವು ಅನಾಮಧೇಯ ವ್ಯಕ್ತಿಗಳು ಬೇಕು ಅಂತಲೇ ಬೆಂಕಿ ಹಚ್ಚುತ್ತಿದ್ದಾರೆ. ಜನವರಿ ತಿಂಗಳಿಂದ ಈವರೆಗೆ 200 ಹೆಕ್ಟೇರ್ ಪ್ರದೇಶದಲ್ಲಿನ ಅಪರೂಪದ ಸಸ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಹೀಗಾಗಿ ಗದಗ ಅರಣ್ಯ ಇಖಾಖೆ ಬೆಂಕಿ ಹಚ್ಚಿದವರ ವಿರುದ್ಧ 15 ಪ್ರಕರಣಗಳನ್ನು ದಾಖಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅನಾಮಧೇಯ ವ್ಯಕ್ತಿಗಳ ವಿರುದ್ಧ 14 ಪ್ರಕರಣ, ಒಂದು ವಿಂಡ್ ಪ್ಯಾನ್ ಕಂಪನಿ ವಿರುದ್ಧ ದೂರು ದಾಖಲಾಗಿದೆ.
ಗದಗ ಜಿಲ್ಲೆಯ ದೋಣಿ ತಾಂಡಾ, ಶಿಂಗಟರಾಯನಕೇರಿ, ಅತ್ತಿಕಟ್ಟಿ, ಕೊರ್ಲಹಳ್ಳಿ ಸೇರಿದಂತೆ ಕಪ್ಪತಗುಡ್ಡದ ಅಂಚಿನಲ್ಲಿರುವ ಗ್ರಾಮದ ಜನರು ಬೆಂಕಿ ಹಚ್ಚುತ್ತಿದ್ದಾರೆ ಎನ್ನುವ ಶಂಕೆ ಕೂಡಾ ವ್ಯಕ್ತವಾಗಿದೆ. ಜೊತೆಗೆ ಖಾಸಗಿ ವಿಂಡ್ ಫ್ಯಾನ್ ಕಂಪನಿಯ ವಿಂಡ್ ಪ್ಯಾನ್ ನಿಂದ ಬೆಂಕಿ ಹತ್ತಿಕೊಂಡು ಸಸ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದ್ದು, ಆ ಕಂಪನಿ ವಿರುದ್ಧವೂ ದೂರು ದಾಖಲಾಗಿದೆ. ಬೆಂಕಿ ಹಚ್ಚಿದವರ ಕುರಿತು ಮಾಹಿತಿ ಲಭ್ಯವಾದರೆ ಅರಣ್ಯ ಇಲಾಖೆಗೆ ತಿಳಿಸುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಣೆ ಮಾಡಿದ ನಂತರ ಬೆಂಕಿ ಹಚ್ಚುವ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಕಪ್ಪತಗುಡ್ಡದಲ್ಲಿ ಖನಿಜ ಸಂಪತ್ತು ಲೂಟಿ ಮಾಡಬೇಕು ಎನ್ನುವ ಹುನ್ನಾರದಿಂದ ಗಣಿ ಕುಳಗಳು ಸ್ಥಳೀಯ ಜನರನ್ನು ಮುಂದೆ ಬಿಟ್ಟು ಬೆಂಕಿ ಹಚ್ಚಿಸುತ್ತಿದ್ದಾರೆ ಎನ್ನುವ ಅನುಮಾನ ಕೂಡಾ ದಟ್ಟವಾಗಿದೆ. ಆದ್ರೆ ಈಗ ತಾನೇ ಬೇಸಿಗೆ ಆರಂಭವಾಗಿದ್ದು, ಅಲ್ಪ ಸಮಯದಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು, ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿವೆ. ಹಾಗಾಗಿ ಪರಿಸರ ಪ್ರೇಮಿಗಳು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ದೂರು ದಾಖಲು ಮಾಡಿಕೊಂಡರೆ ಸಾಲದು ದುಷ್ಕರ್ಮಿಗಳನ್ನು ಪತ್ತೆ ಮಾಡಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.