ಗದಗ: ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಸೋಲನುಭವಿಸಿದ್ದೆವು. ಆದ್ರೆ, ನಿಮ್ಮೆಲ್ಲರ ಉತ್ಸಾಹ ನೋಡಿದ್ರೆ ಈ ಬಾರಿ 4 ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗದಗದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಟೀಕಾ ಸಮರ ನಡೆಸಿದರು. ಕಾಂಗ್ರೆಸ್ನ ಪ್ರಜಾಧ್ವನಿ ಕನ್ನಡಿಗರ ಧ್ವನಿ. ಹಿಂದೆಂದೂ ಈ ರೀತಿಯ ಜನರ ಸ್ಪಂದನೆಯನ್ನು ನಾನು ಕಂಡಿರಲಿಲ್ಲ. ಇದನ್ನು ಕಂಡು ಬಿಜೆಪಿಯವರಿಗೆ ಈಗಾಗಲೇ ನಡುಕ ಶುರುವಾಗಿದೆ ಎಂದರು.
ಬೊಮ್ಮಾಯಿ ಅವರ ಪಾಪದ ಕೊಡ ತುಂಬಿ ತುಳುಕಾಡುತ್ತಿದೆ. ಅಧಿಕಾರದಲ್ಲಿದ್ದಾಗ ಯಾರೇ ಪಾಪ ಮಾಡಿದ್ರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತೆ. ಪಾಪ ಮಾಡಿದವರನ್ನು ನಾವು ಸುಮ್ಮನೆ ಮನೆಗೆ ಹೋಗಲು ಬಿಡುವ ಮಾತೇ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ವಿಶೇಷ ತನಿಖಾ ಆಯೋಗ ತಂಡ ರಚನೆ ಮಾಡಿ ಲೂಟಿ ಹೊಡೆದವರಿಗೆ ಕಠಿಣ ಶಿಕ್ಷೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಪ್ರತಿಜ್ಞೆ ಮಾಡಿದರು.
ಬೊಮ್ಮಾಯಿ ಆಡಳಿತ ಅಲಿ ಬಾಬಾ ಮತ್ತು ನಲವತ್ತು ಮಂದಿ ಕಳ್ಳರ ಕೂಟ. ಕರ್ನಾಟಕದ ಇತಿಹಾಸದಲ್ಲಿಯೇ ಗುತ್ತಿಗೆದಾರ ಸಂಘದವರು ಇದೇ ಮೊದಲ ಬಾರಿಗೆ ಪ್ರಧಾನಿಗೆ ಪತ್ರ ಬರೆದರು. ಪ್ರಧಾನಿ ಮೋದಿ ನಾ ಖಾವುಂಗಾ, ನಾ ಖಾನೇ ದೂಂಗಾ ಅಂತ ಹೇಳಿದ್ದರು. ನೀವು ಬೊಮ್ಮಾಯಿ ಮತ್ತು ತಂಡಕ್ಕೆ ಯಾಕೆ ಲಂಚ ಹೊಡಿಯಲು ಬಿಟ್ರಿ?. 40% ಕಮಿಷನ್ನಿಂದ ಹಲವು ಗುತ್ತಿಗೆದಾರರು ಸತ್ತು ಹೋದರು. ಇಷ್ಟಾದ್ರೂ ಬೊಮ್ಮಾಯಿ ಎವಿಡೆನ್ಸ್ ಕೊಡಿ ಅಂತ ಕೇಳ್ತಾರೆ ಎಂದು ಪ್ರಧಾನಿ ಮೋದಿ ಹಾಗೂ ಆಡಳಿತರೂಢ ರಾಜ್ಯ ಸರ್ಕಾರವನ್ನು ಟೀಕಿಸಿದರು.
'ಗ್ರಾಮೀಣ ವಿವಿ ಕಾಂಗ್ರೆಸ್ ಕೊಡುಗೆ': ಕಾಂಗ್ರೆಸ್ ಸರ್ಕಾರವಿದ್ದಾಗ ಸಾಕಷ್ಟು ಕೆಲಸಗಳನ್ನು ಗದಗದಲ್ಲಿ ಮಾಡಿದ್ದೇವೆ. ಇಡೀ ದೇಶದಲ್ಲಿರದ ಗ್ರಾಮೀಣ ಯುನಿವರ್ಸಿಟಿಯನ್ನು ಜಿಲ್ಲೆಗೆ ಕೊಡಲಾಗಿದೆ. ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ ಅಂತ ಕೇಳಿದ್ದೇನೆ. ನಮ್ಮ ಸರ್ಕಾರ ಬಂದ ಮೇಲೆ ಕುಡಿಯೋ ನೀರಿಗೆ ಹೊಸ ಯೋಜನೆ ತರುವ ಮೂಲಕ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಮಹದಾಯಿ ಯೋಜನೆ ವಿಚಾರ: ಚುನಾವಣೆ ಸಮಯದಲ್ಲಿ ಕಳಸಾ ಬಂಡೂರಿಗೆ ಡಿಪಿಆರ್ ಅನುಮೋದನೆ ನೀಡಿದರು. ನಾವು ಅಧಿಕಾರಕ್ಕೆ ಬಂದರೆ ಒಂದೇ ವರ್ಷದಲ್ಲಿ ಮಹದಾಯಿ ಯೋಜನೆಗೆ ಹಣ ಬಿಡುಗಡೆ ಮಾಡುತ್ತೇವೆ. ಈ ಸರ್ಕಾರ ಇಂದಿರಾ ಕ್ಯಾಂಟೀನ್ ಬಂದ್ ಮಾಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ಇಂದಿರಾ ಕ್ಯಾಂಟೀನ್ ಶುರು ಮಾಡುತ್ತೇವೆ. ನಾವು ಕೊಟ್ಟಿರುವ ಭರವಸೆಗಳನ್ನು ಈಡೇರಿಸದಿದ್ದರೆ ನಮ್ಮನ್ನು ಯಾವ ಕಾಲಕ್ಕೂ ನಂಬಬೇಡಿ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಅವರು ಅದಾನಿ ಮತ್ತು ಅಂಬಾನಿಯಂತವರಿಗೆ 30% ಟ್ಯಾಕ್ಸ್ ನಿಗದಿ ಮಾಡಿದ್ದರು. ಆದ್ರೆ, ಮೋದಿ ಸರ್ಕಾರ ಇವರಿಗೆ 22% ಟ್ಯಾಕ್ಸ್ ನಿಗದಿ ಮಾಡಿದೆ ಎಂದು ಬಂಡವಾಳಶಾಹಿಳಿಗಾಗಿ ಕೇಂದ್ರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿಗೆ 40 ಪರ್ಸೆಂಟ್ ಕಳಂಕ ಅಂಟಿಕೊಂಡಿದೆ:ಸಿದ್ದರಾಮಯ್ಯ ಟೀಕಾ ಪ್ರಹಾರ
ಹೋಟೆಲ್ಗಳಲ್ಲಿ ತಿನಿಸುಗಳಿಗೆ ರೇಟ್ ಬೋರ್ಡ್ ಹಾಕಿರುತ್ತಾರೆ. ಅದೇ ರೀತಿ ಸರ್ಕಾರ ವಿಧಾನಸೌಧದಲ್ಲಿ ಎಲ್ಲಾ ಕೆಲಸಕ್ಕೂ ರೇಟ್ ಫಿಕ್ಸ್ ಮಾಡಿದೆ ಎಂದು ಆರೋಪಿಸಿದ ಅವರು, ಮಹದಾಯಿ, ಶಿಂಗಟಾಲೂರು ಏತನೀರಾವರಿ ಯೋಜನೆ ಸೇರಿದಂತೆ 2 ಲಕ್ಷ ಕೋಟಿ ಖರ್ಚು ಮಾಡುವ ಗುರಿ ಇದೆ. ಅಲ್ಲದೇ, ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುವ ಆಲೋಚನೆ ಇದೆ. ಗದಗ ಜಿಲ್ಲೆಗೆ ನೀರಿನ ಸಮಸ್ಯೆ ಇದ್ದು, ಇದನ್ನು ನಮ್ಮ ಸರ್ಕಾರ ಬಗೆಹರಿಸಲಿದೆ ಎಂದು ಭರವಸೆ ಕೊಟ್ಟರು.
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಸಮಾವೇಶದಲ್ಲಿ ಭಾಗಿಯಾದ ಜನರನ್ನು ನೋಡಿದ್ರೆ ಇಲ್ಲಿನ 4 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗುವುದರಲ್ಲಿ ಸಂದೇಹವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರು ಅಧಿಕಾರಕ್ಕೆ ಬಂದಹಾಗೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. ಮಾತು ಮುಂದುವರಿಸಿದ ಅವರು, ಸದ್ಯಕ್ಕೆ ಡಬಲ್ ಇಂಜಿನ್ ಸರ್ಕಾರ ಇದೆ. ಯಾವ ಯಾವ ಕೆಲಸ ಮಾಡಿದ್ದೇವೆ ಅನ್ನೋದರ ಬಗ್ಗೆ ಅವರು ಒಂದಾದರೂ ಸಾಕ್ಷಿ ಕೊಡಲಿ. ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರಾಜ್ಯದಲ್ಲಿ ಸಾಕ್ಷಿ ಕೊಡುವಂತಹ ಯಾವುದೇ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: 'ಒಂದು ಎತ್ತು ಸಾಕುವ ಅರ್ಹತೆ ಇಲ್ಲ, ನಮ್ಮ ವಿರುದ್ಧ ಮಾತಾಡ್ತಾರೆ': ಬಿಜೆಪಿ ನಾಯಕರ ವಿರುದ್ಧ ಶಾಮನೂರು ಗರಂ
ಬಿಜೆಪಿ ಸರ್ಕಾರದಲ್ಲಿ ಕಮಿಷನ್ ಇಲ್ಲದೇ ಯಾವುದೇ ಕೆಲಸ ಮಾಡುವುದಿಲ್ಲ. ಸ್ವತಃ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಈ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈ ಹಿಂದೆ ಪರಿಶುದ್ಧ ಆಡಳಿತ ನೀಡಿದೆ. ಗ್ಲೋಬಲ್ ಇನ್ವೆಸ್ಟ್ಮೆಂಟ್ ಮಾಡಿ 10 ಲಕ್ಷ ಕೋಟಿ ರೂ ಬಂಡವಾಳ ಬಂದಿದೆ ಅಂತ ಹೇಳಿದ್ದಾರೆ. ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಅವರೇ ನಿಮ್ಮೂರಿಗೆ ಎಷ್ಟು ಲಕ್ಷ ಬಂತು ಹೇಳಿ ಎಂದು ಸವಾಲು ಹಾಕಿದರು. ಕೊರೊನಾ ಕಾಲದಲ್ಲಿ ಆಸ್ಪತ್ರೆಯಲ್ಲಿ ಬೆಡ್ಗಾಗಿ ಕಮಿಷನ್ ಪಡೆಯುವ ಮೂಲಕ ಅಲ್ಲಿಯೂ ಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು.
ವಿಧಾನಸೌಧದ ಗೋಡೆಗಳು ಕಾಸು ಕಾಸು ಅಂತಿವೆ. ಬಿಜೆಪಿ ಪಾಪದ ಪುರಾಣ ಪುಸ್ತಕ ಅಂತ ಪ್ರಜಾ ಧ್ವನಿ ಯಾತ್ರೆಯಲ್ಲಿ ಮಾಡಿದ್ದೇವೆ. ಪ್ರತಿ ಕುಟುಂಬಕ್ಕೂ ಇನ್ನೂರು ಯೂನಿಟ್ ವಿದ್ಯುತ್ ಉಚಿತವಾಗಿ ಕೊಡ್ಬೇಕು ಅಂತ ತೀರ್ಮಾನಿಸಿದ್ದೇವೆ. ಗೃಹಿಣಿಗೆ ವರ್ಷಕ್ಕೆ 24,000 ಸಾವಿರ ಕೊಡ್ತೇವೆ ಅಂತ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದ್ದಾರೆ. ಪ್ರತಿ ಮನೆಗೂ ಕಾಂಗ್ರೆಸ್ ಕಾರ್ಯಕರ್ತರು ತೆರಳಿ ಈ ವಿಚಾರ ಮುಟ್ಟಿಸಬೇಕು ಎಂದು ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಮುಖಂಡರಾದ ಬಿ.ಕೆ.ಹರಿಪ್ರಸಾದ್, ಹೆಚ್.ಕೆ.ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.