ಗದಗ: ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಜಿಲ್ಲೆಯ ಶಿರಹಟ್ಟಿ ಪಟ್ಟಣದ ಐತಿಹಾಸಿಕ ಫಕೀರೇಶ್ವರ ಮಠದ ಜಾತ್ರೆ ರದ್ದು ಮಾಡಲಾಗಿದೆ.
ಈ ಕುರಿತಂತೆ ಮಠದಲ್ಲಿ ಭಕ್ತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಜಗದ್ಗುರು ಫಕೀರ ಸಿದ್ಧರಾಮ ಶ್ರೀಗಳು, ಲಾಕ್ಡೌನ್ ಪರಿಣಾಮ ಜಾತ್ರೆ ರದ್ದು ಮಾಡಲಾಗಿದೆ. ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಫಕೀರೇಶ್ವರನನ್ನ ನೆನೆದು ಜಾತ್ರೆಯನ್ನು ಆಚರಣೆ ಮಾಡಿ ಎಂದು ಹೇಳುತ್ತಲೇ ಕಣ್ಣೀರು ಹಾಕಿದರು.
ಪ್ರತಿ ವರ್ಷ ಮೇ ತಿಂಗಳಲ್ಲಿ ಶಿರಹಟ್ಟಿಯಲ್ಲಿ ಈ ಜಾತ್ರೆ ನಡೆಯುತ್ತಿತ್ತು. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುವ ಐತಿಹಾಸಿಕ ಶ್ರೀಮಠವಾಗಿದ್ದು, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಿಂದ ಜಾತ್ರೆ ನೆರವೇರುತ್ತಿತ್ತು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಾತ್ರೆ ರದ್ದಾಗಿದೆ ಎನ್ನಲಾಗುತ್ತಿದೆ.