ಗದಗ: ಜಗದೀಶ್ ಶೆಟ್ಟರ್ ಊರಲ್ಲಿ ರಸ್ತೆ ಇಲ್ದೆ ಹಾಗೆ ಬಿದ್ದಿತ್ತು. ನಾನೇ 48 ಕೋಟಿ ರೂಪಾಯಿ ಕೊಟ್ಟು ಮಾಡಿಸಿದೆ ಅಂತಾ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ. ಉತ್ತರ ಕರ್ನಾಟಕಕ್ಕೆ ಹೆಚ್ ಡಿ ರೇವಣ್ಣ ಅವರ ಕೊಡುಗೆ ಏನು ಅನ್ನೋ ಜಗದೀಶ್ ಶೆಟ್ಟರ್ ಪ್ರಶ್ನೆಗೆ ಮಾಜಿ ಸಚಿವರು ತಿರುಗೇಟು ನೀಡಿದ್ದಾರೆ.
ಪ್ರವಾಹ ಪೀಡಿತ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಹೆಚ್ ಡಿ ರೇವಣ್ಣ, ಜಗದೀಶ್ ಶೆಟ್ಟರನ್ನೇ ಕೇಳ್ರಿ ಅವರ ಊರಲ್ಲೇ ರಸ್ತೆ ಮಾಡಿಸೋಕೆ ಆಗಿರಲಿಲ್ಲ. ಅಧಿಕಾರಕ್ಕೆ ಬಂದ 14 ತಿಂಗಳಲ್ಲಿ ಈ ರೇವಣ್ಣ ಮಾಡಿಸಬೇಕಾಯಿತು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ನಮ್ಮ ಕುಟುಂಬ ಏನು ಮಾಡಿದೆ ಅಂತಾ ಟೈಮ್ ಬಂದಾಗ ಹೇಳ್ತೀನಿ. ಈಗ ರಾಜಕೀಯ ಮಾಡೋಕೆ ಹೋಗಲ್ಲ ಎಂದರು.
46 ಸಾವಿರ ಕೋಟಿ ಸಾಲಮನ್ನಾ ಯಾರು ಮಾಡಿದ್ರು. ಅಲ್ಲದೇ 48 ಕೋಟಿ ಕೊಟ್ಟು ಅವರ ಊರಿನ ರೋಡ್ ಮಾಡಿಸಿದ್ದು ನಾನು. ಅದರ ಉದ್ಘಾಟನೆಗೆ ಬನ್ರೀ ಅಂತಾ ಅವರೇ ಫೋನ್ ಮಾಡಿ ಕರೆದಿದ್ರು ಅಂತಾ ಜಗದೀಶ ಶೆಟ್ಟರ್ ಕಾಲೆಳೆದ್ರು. ಇನ್ನು ವರ್ಗಾವಣೆ ದಂಧೆ ಕುರಿತ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ವರ್ಗಾವಣೆ ದಂಧೆ ಇದ್ರೆ ಯಡಿಯೂರಪ್ಪ ಅವರಿಗೆ ತನಿಖೆ ಮಾಡಿಸೋಕೆ ಹೇಳಿ, ಯಾರು ಬೇಡ ಅಂತಾರೆ. ಬೇಕಿದ್ದರೆ ವರ್ಗಾವಣೆ ಮಾಡಿಸಿರೋ ಲಿಸ್ಟ್ ಜಗದೀಶ್ ಶೆಟ್ಟರ್ಗೆ ಕೊಡ್ತೀನಿ, ಅವರೇ ತನಿಖೆ ಮಾಡಿಸಲಿ ಎಂದು ಪ್ರತಿಕ್ರಿಯಿಸಿದ್ದಾರೆ.