ಗದಗ: ಜನವಸತಿ ಪ್ರದೇಶದಲ್ಲಿ ಕೊರೊನಾ ವೈರಸ್ ಸಂಬಂಧ ಜನರನ್ನು ಕ್ವಾರಂಟೈನ್ ಮಾಡಲು ಹೊರಟಿರುವ ತಾಲೂಕಾಡಳಿತದ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ಇಲ್ಲಿನ ಮುಂಡರಗಿ ಪಟ್ಟಣದ ಬಳಿಯ ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಕೊರೊನಾ ಶಂಕಿತರನ್ನು ಶಿಫ್ಟ್ ಮಾಡಲು ತಾಲೂಕಾಡಳಿತ ತಯಾರಿ ನಡೆಸಿದೆ.
ಅಲ್ಲದೆ ಸ್ಥಳೀಯ ಪುರಸಭೆ ಸಿಬ್ಬಂದಿ ವಸತಿ ನಿಲಯದಲ್ಲಿ ಸ್ಚಚ್ಛತೆ ಕಾರ್ಯದ ಜೊತೆಗೆ ಕ್ವಾರಂಟೈನ್ಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರ ಕರೆ ನೀಡಿರುವ ಲಾಕ್ಡೌನ್ ಹಾಗೂ ಕ್ವಾರಂಟೈನ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಜನವಸತಿ ಪ್ರದೇಶದಲ್ಲಿ ಶಂಕಿತರ ಕ್ವಾರಂಟೈನ್ ಮಾಡುತ್ತಿರುವುದು ಭಯ ಹುಟ್ಟಿಸಿದೆ ಎಂದು ಸ್ಥಳೀಯರು ಆತಂಕ ಹೊರ ಹಾಕಿದ್ದಾರೆ.
ಇದು ಜನವಸತಿ ಪ್ರದೇಶವಾಗಿದ್ದು, ಮಕ್ಕಳು, ಮಹಿಳೆಯರು ಓಡಾಡುವ ಸ್ಥಳ. ಹಾಗಾಗಿ ಇಲ್ಲಿ ಕ್ವಾರಂಟೈನ್ ಮಾಡುತ್ತಾರೆ ಅಂತ ಕೇಳಿದಾಕ್ಷಣ ಇಲ್ಲಿನ ಸ್ಥಳೀಯರು ಭಯಭೀತರಾಗಿದ್ದಾರೆ. ಪಟ್ಟಣದ ಹೊರವಲಯದಲ್ಲಿ ಇನ್ನಿತರೆ ಹಲವಾರು ಸರ್ಕಾರಿ ಕಟ್ಟಡಗಳು ಇವೆ. ಅಂತಹ ಕಟ್ಟಡಗಳಲ್ಲಿ ಮಾಡಿದ್ರೆ ಯಾರಿಗೂ ಆತಂಕ ಇರೋದಿಲ್ಲಾ. ಆದ್ರೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಊರ ಹೊರಗಿನಿಂದಲೇ ವ್ಯವಸ್ಥೆ ಮಾಡುವುದು ಬಿಟ್ಟು ಮಹಾಮಾರಿಯನ್ನು ಊರೊಳಗೆ ತರುವುದು ಸರಿಯಲ್ಲ ಎಂದು ಜನರು ಹೇಳಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ಇಲ್ಲಿ ಕ್ವಾರಂಟೈನ್ ಮಾಡಲು ಬಿಡುವುದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ.