ಗದಗ: ಆರೋಗ್ಯ ಇಲಾಖೆಯು ಎಡವಟ್ಟಿನಿಂದಾಗಿ ಈಗಾಗಲೇ ಒಂದು ಗ್ರಾಮದವರು ಇಡೀ ಊರಿಗೆ ಊರೇ ಖಾಲಿ ಮಾಡಿ ಜಮೀನುಗಳಲ್ಲಿ ವಾಸ ಮಾಡುತ್ತಿದ್ದಾರೆ. ಘಟನೆ ಮಾಸುವ ಮುನ್ನವೇ ಆರೋಗ್ಯ ಇಲಾಖೆ ಮತ್ತೊಂದು ಎಡವಟ್ಟು ಮಾಡಿಬಿಟ್ಟಿದೆ.
ಮಹಿಳೆಯೊಬ್ಬರು ತೀರಿಕೊಂಡ ಐದು ದಿನಗಳ ಬಳಿಕ ಕೊರೊನಾ ಎಂದು ವರದಿ ದೃಢಪಡಿಸಿದೆ. ಹೀಗಾಗಿ, ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಇಡೀ ಊರಿನ ಜನ ಈಗ ಭಯಭೀತರಾಗಿದ್ದಾರೆ. ಕೆಲವರು ಊರು ತೊರೆದಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದ 64 ವರ್ಷದ ಮಹಿಳೆ ಸಾವನ್ನಪ್ಪಿದ ಐದು ದಿನದ ಬಳಿಕ ಕೊರೊನಾ ದೃಢಪಟ್ಟಿದೆ. ಕಿಡ್ನಿ ವೈಫಲ್ಯದಿಂದಾಗಿ ಆಕೆಗೆ ಲೋ ಬಿಪಿ ಆಗಿತ್ತು. ಹೀಗಾಗಿ, ಅವರನ್ನ ಯಳವತ್ತಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗೆ, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಜುಲೈ 17ರಂದು ಮಹಿಳೆ ಸಾವನ್ನಪ್ಪಿದರು.
ಅಂತ್ಯಸಂಸ್ಕಾರಕ್ಕೆ ಶವವನ್ನು ತೆಗೆದುಕೊಂಡು ಹೋಗಬಹುದು. ಎರಡು ಗಂಟೆ ನಂತರ ಕೊವಿಡ್-19 ವರದಿ ಬರುತ್ತದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ, ಗ್ರಾಮಸ್ಥರು ಸೇರಿದಂತೆ ಬಂದು - ಬಳಗ ಅಂತ್ಯಸಂಸ್ಕಾರ ಮಾಡಿದ್ದೇವೆ ಎನ್ನುತ್ತಾರೆ ಮೃತಳ ಮಗ.
ಐದು ದಿನದ ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ಕುಟುಂಬಸ್ಥರಿಗೆ ಸಾವನ್ನಪ್ಪಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ. ಹೀಗಾಗಿ, ಇಡೀ ಕುಟುಂಬ ಸೇರಿದಂತೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರಿಗೆ ಆತಂಕ ಆರಂಭವಾಗಿದೆ. ಮಹಿಳೆಯ ವಾಸವಾಗಿರುವ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಿ ನಿಷೇಧಾಜ್ಞೆ ಹೇರಲಾಗಿದೆ. ಕುಟುಂಬಸ್ಥರು ಹೋಮ್ ಕ್ವಾರಂಟೈನ್ ಮಾಡಿ, ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರ ಪತ್ತೆ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ.
ಈಗ ನನ್ನ ಗಮನಕ್ಕೆ ಬಂದಿದೆ. ವರದಿಯಲ್ಲಿ ಏನಿದೆ ಎಂಬುದನ್ನು ಪರಿಶೀಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹೇಳುತ್ತಾರೆ. ಇನ್ನು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಸತೀಶ್ ಬಸರಿಗಿಡದ ಸಂಪರ್ಕಕ್ಕೆ ಸಿಕಿಲ್ಲ. ಹೀಗಾಗಿ, ವರದಿ ಬರುವ ಮುನ್ನ ಹೇಗೆ ಶವ ಹಸ್ತಾಂತರ ಮಾಡಿದ್ದಾರೆ ಎಂಬ ಗೊಂದಲ ಇನ್ನೂ ನಿವಾರಣೆಯಾಗಿಲ್ಲ.
ಇದೇ ರೀತಿ ಎಡವಟ್ಟು ಮಾಡಿ ಶೀತಾಲಹರಿ ಗ್ರಾಮದಲ್ಲಿ 13 ಮಂದಿಗೆ ಕೊರೊನಾ ಬಂದಿತ್ತು. ಒಬ್ಬ ಕೆಎಸ್ಆರ್ಟಿಸಿ ಚಾಲಕ ಕೊರೊನಾದಿಂದ ಸಾವನ್ನಪ್ಪಿದ್ದರು. ಆತನನ್ನೂ ಇದೇ ರೀತಿ ಅಂತ್ಯಸಂಸ್ಕಾರ ಮಾಡಿದ ಬಳಿಕ, ಪಾಸಿಟಿವ್ ವರದಿ ಬಂದಿತ್ತು. ಭಯದಿಂದ ಇಡೀ ಊರೇ ಈಗ ಖಾಲಿಯಾಗಿ ಜಮೀನುಗಳಲ್ಲಿ ವಾಸ ಮಾಡುತ್ತಿದೆ. ಹೀಗಾಗಿ, ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.