ಗದಗ : ಕೊರೊನಾದಿಂದ ಇಡೀ ದೇಶದ ಆರ್ಥಿಕತೆ ನೆಲಕಚ್ಚಿದೆ. ಇದಕ್ಕೆ ಕೃಷಿ ಕ್ಷೇತ್ರವೂ ಹೊರತಾಗಿಲ್ಲ. ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದ್ದು, ಕೃಷಿ ಚಟುವಟಿಕೆಗಳಿಗೆ ಭಾರೀ ಪೆಟ್ಟು ನೀಡಿದೆ. ತೈಲ ಬೆಲೆ ಹೆಚ್ಚಳವಾದ ಪರಿಣಾಮ ಟ್ರ್ಯಾಕ್ಟರ್ನಿಂದ ಹೊಲ ಉಳುಮೆ ಮಾಡಲು ಸಾಧ್ಯವಾಗ್ತಿಲ್ಲ. ಜತೆಗೆ ಕೃಷಿ ಚಟುವಟಿಕೆಗಳಿಗೂ ದರ ಏರಿಕೆ ಬಿಸಿ ಮುಟ್ಟಿದೆ. ಬಿತ್ತನೆ ಮಾಡೋಕೆ ರೈತರು, ನೊಗಕ್ಕೆ ಹೆಗಲು ಕೊಟ್ಟಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿಯಲ್ಲಿ ಅನ್ನದಾತರ ಸಂಕಷ್ಟ ಹೇಳತೀರದು. ಒಂದು ಎಕರೆ ಭೂಮಿ ಉಳುಮೆ ಮಾಡುವುದಕ್ಕೆ ಟ್ರ್ಯಾಕ್ಟರ್ ಮಾಲೀಕರು ಒಂದೂವರೆ ಸಾವಿರ ರೂಪಾಯಿ ಕೇಳುತ್ತಿದ್ದಾರೆ.
ದವಸ ಧಾನ್ಯಗಳ ಬೆಲೆಯೂ ಹೆಚ್ಚಳವಾಗಿರುವುದರಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸರ್ಕಾರ ತೈಲ ದರ ಇಳಿಸಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ದಿಕ್ಕು ತೋಚದ ಜನತೆ, ನೊಗಗಳಿಗೆ ಹೆಗಲುಕೊಟ್ಟು ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ. ಮುಂಗಾರು ಆರಂಭವಾಗಿದ್ದರೂ ಬೆಳೆ ಬೆಳೆಯಲು ಸರಿಯಾದ ಸೌಕರ್ಯಗಳಿಲ್ಲ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.