ಗದಗ: ಸರಕಾರದ ಹಣ ದುರುಪಯೋಗ ಮತ್ತು ಕರ್ತವ್ಯಲೋಪ ಆರೋಪದಡಿ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರಿ ಬೊಕ್ಕಸದ 78.55 ಲಕ್ಷ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ಅಲ್ಲದೇ ಅಕ್ರಮ ಎಸಗಿರುವುದು ತನಿಖಾ ಸಮಿತಿಯೊಂದರ ವರದಿಯಿಂದಲೂ ದೃಢಪಪಟ್ಟಿದ್ದು ಪಿಡಿಒ ಸಂಜಯ ಚವಡಾಳ ಅವರನ್ನು ಕಾಯ್ದೆಯಡಿ ಅಮಾನತು ಮಾಡಲಾಗಿದೆ ಎಂದು ಜಿ.ಪಂ.ಸಿಇಒ ಸುಶೀಲಾ ಬಿ ಪ್ರಕಟಣೆ ತಿಳಿಸಿದ್ದಾರೆ.
ಪಿಡಿಒ ವಿರುದ್ಧ ನಾನಾ ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಂಜಯ ಚವಡಾಳ ಕಾರ್ಯನಿರ್ವಹಿಸಿದ 9ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಲ್ಲಿ ದಾಖಲಾತಿ ಪರಿಶೀಲನೆ ನಡೆಸಿದ ಸಮಿತಿಯು ಪರಿಶೀಲನೆ ನಂತರ ಜಿ.ಪಂ. ಸಿಇಒ ಅವರಿಗೆ ವರದಿ ಸಲ್ಲಿಸಿತ್ತು. ವರದಿಯಲ್ಲಿ ಸಂಜಯ ಎನ್. ಚವಡಾಳ ಹಲವು ಅಕ್ರಮ ಎಸಗಿರುವ ಬಗ್ಗೆ ಬಹಿರಂಗವಾಗಿದೆ.
ಪತ್ನಿ ಹೆಸರಲ್ಲಿ ಏಜನ್ಸಿ ಸೃಷ್ಟಿಸಿ, ಖಾತೆಗೆ ಅಕ್ರಮ ಹಣ ವರ್ಗಾವಣೆ, ವೈಯಕ್ತಿಕ ಖರ್ಚಿಗಾಗಿ ಸರ್ಕಾರದ ಲಕ್ಷಾಂತರ ರೂಪಾಯಿ ದುರ್ಬಳಕೆ, ಸರ್ಕಾರಿ ಆದೇಶ ಉಲ್ಲಂಘಿಸಿ ಚೆಕ್ ಮುಖಾಂತರ ಹಣ ಪಾವತಿ, ಗ್ರಾ.ಪಂ.ಗಳಲ್ಲಿನ ನಾನಾ ವಸ್ತುಗಳ ಖರೀದಿಯ ವೋಚರ್ ಮತ್ತು ಬಿಲ್ಲುಗಳನ್ನು ಲೆಕ್ಕ ತನಿಖೆಗೆ ಒಪ್ಪಿಸದೇ ಇರುವುದೂ ಸೇರಿದಂತೆ ಸರ್ಕಾರದ ನಾನಾ ಕಾನೂನುಗಳನ್ನು ಉಲ್ಲಂಘನೆ ಮಾಡಿರುವುದನ್ನು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
ಸಮಿತಿ ನೀಡಿದ ವರದಿಯ ಅಂಶಗಳು:
1. ಗ್ರಾ.ಪಂ ಕ್ರಿಯಾ ಯೋಜನೆ, ನಗದು ಪುಸ್ತಕ, ಚೆಕ್ ಕೌಂಟರ್, ಬಿಲ್ಲುಗಳು, ವೋಚರ್ಗಳು ಹಾಗೂ ದಾಸ್ತಾನು ವಹಿವಾಟುಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸದೇ ಇರುವ ಕಾರಣ 32.52 ಲಕ್ಷ ರೂ ವಸೂಲಿಗೆ ಮುಖ್ಯ ಲೆಕ್ಕಾಧಿಕಾರಿಗಳ ಸೂಚನೆ.
2. ಸರ್ಕಾರದ ಆದೇಶ ಉಲ್ಲಂಘಿಸಿ 21.12 ಲಕ್ಷ ರೂ.ಗಳ ಚೆಕ್ ವ್ಯವಹಾರ.
3. ಮುಂಡರಗಿ ತಾಲೂಕಿನ ವೆಂಕಟಾಪುರ ಗ್ರಾಮದ ಮುಖ್ಯಮಂತ್ರಿ ಮಾದರಿ ಗ್ರಾಮವಿಕಾಸ ಯೋಜನೆಯಲ್ಲಿ 6.93 ಲಕ್ಷ ರೂ.ಗಳನ್ನು ನಿಯಮಬಾಹಿರವಾಗಿ ಸಮೃದ್ಧಿ ಎಂಟರ್ ಪ್ರಾಯಿಜಸ್ಗೆ ವರ್ಗಾವಣೆ.
4. ಸಮೃದ್ಧಿ ಎಂಟರ್ ಪ್ರಾಯಿಜಸ್ಗೆ 15ನೇ ಹಣಕಾಸು ಯೋಜನೆಯಲ್ಲಿ 11.39 ಲಕ್ಷ ರೂ ನಿಯಮಬಾಹಿರ ವರ್ಗಾವಣೆ, ಕರ್ತವ್ಯಲೋಪ.
5. ಹಳ್ಳಿಕೇರಿ ಗ್ರಾ.ಪಂ ನಲ್ಲಿ ವಿವಿಧ ಏಜನ್ಸಿಗಳಿಗೆ ಸರ್ಕಾರದ ಖರೀದಿ ನಿಯಮ ಉಲ್ಲಂಘಿಸಿ 14.19 ಲಕ್ಷ ಪಾವತಿ.
6. ಹಳ್ಳಿಕೇರಿ ಗ್ರಾ.ಪಂನಿಂದ ವರ್ಗಾವಣೆಗೊಂಡರೂ ಹಳ್ಳಿಕೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಪಿಡಿಒಗೆ ಅಧಿಕಾರ ಹಸ್ತಾಂತರ ಮಾಡದ ಸಂಜಯ ಚವಡಾಳ.
7. ವೈಯಕ್ತಿಕ ಉದ್ದೇಶಕ್ಕೆ ಸರ್ಕಾರದ 9 ಲಕ್ಷ ಹಣ ದುರ್ಬಳಕೆ.
8. ಒಟ್ಟಾರೆ 4.87 ಕೋಟಿ ಆಕ್ಷೇಪಣೆ ಮೊತ್ತ ಹಾಗೂ 7.55 ಲಕ್ಷ ವಸೂಲಾತಿ ಮೊತ್ತ ಉಲ್ಲೇಖ.
ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಬಾಗೇವಾಡಿ, ಹಮ್ಮಗಿ, ಹೆಸಾರೂರ, ಕಲಕೇರಿ, ಹಿರೇವಡ್ಡಟ್ಟಿ, ಹಾರೋಗೇರಿ, ಬೀಡನಾಳ, ಜಂತಲಿ, ಶಿರೂರು, ಪೇಠಾಲೂರು, ಹಳ್ಳಿಕೇರಿ ಗ್ರಾಮ ಪಂಚಾಯತಿಗಳಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಸಂಜಯ ಚವಡಾಳ ಅವರು ಸರಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಹಾಗು ಅಕ್ರಮ ಎಸಗಿರುವ ಕುರಿತು ತನಿಖೆ ನಡೆಸಲು ಸಮಿತಿ ರಚಿಸಿತ್ತು.
ಇದನ್ನೂ ಓದಿ: ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ ಆರೋಪ: ಶಿಕ್ಷಕ ಅಮಾನತು