ಗದಗ: ಕಲ್ಲಿನ ಕ್ವಾರಿಗಳ ಸ್ಥಗಿತಕ್ಕೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಗಣಿ ಮಾಲೀಕರಿಗೆ ಆತಂಕ ಶುರುವಾಗಿದೆ. ಹೇಗಾದರೂ ಮಾಡಿ ಕ್ವಾರಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ತೆರೆಮರೆಯಲ್ಲಿ ನಡೆಸುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಲಾಬಿ ನಡೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಪ್ಪತ್ತಗುಡ್ಡ ವನ್ಯಜೀವಿ ಧಾಮದ ಒಂದು ಕೀ.ಮೀ. ವ್ಯಾಪ್ತಿಯಲ್ಲಿ ಬರುವ ಸುಮಾರು 14 ಕಲ್ಲಿನ ಕ್ವಾರಿಗಳನ್ನ ಸ್ಥಗಿತಗೊಳಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿದ ಬೆನ್ನಲ್ಲೇ ಕ್ವಾರಿಗಳನ್ನು ಉಳಿಸಿಕೊಳ್ಳಲು ಮಾಲೀಕರು ಪ್ರಯತ್ನ ನಡೆಸಿದ್ದಾರೆ. ಮುಖ್ಯವಾಗಿ ಸಂಸದರು, ಶಾಸಕರು, ಸಚಿವರ ಸಂಬಂಧಿಗಳ ಕ್ವಾರಿಗಳಾಗಿರುವುದರಿಂದ ಸರಕಾರದ ಮಟ್ಟದಲ್ಲಿ ಲಾಬಿ ನಡೆದಿದೆ ಎನ್ನಲಾಗುತ್ತಿದೆ.
ಜಿಲ್ಲೆಯ ಸೌಂದರ್ಯದ ಸೊಬಗನ್ನು ಹೊತ್ತು ನಿಂತಿರುವ ಕಪ್ಪತಗುಡ್ಡದಲ್ಲಿ ನಿರಂತರವಾಗಿ ಅಕ್ರಮ ಚಟುವಟಿಕೆಗಳೇ ನಡೆಯುತ್ತಾ ಬಂದಿವೆ. ಆದರೆ ಹಲವಾರು ಸಂಘಟನೆಗಳು, ನೂರಾರು ಸಾಮಾಜಿಕ ಹೋರಾಟಗಾರರ ಹೋರಾಟದ ಫಲವಾಗಿ ಸಂರಕ್ಷಿತ ವನ್ಯಜೀವಿ ಧಾಮ ಅಂತ ಘೋಷಣೆಯಾಗಿ ಅವರ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಆದರೆ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಕಪ್ಪತಗುಡ್ಡ ವನ್ಯಜೀವಿ ಧಾಮದ ಕೆಲವೊಂದು ಭಾಗವನ್ನ ಕೈಬಿಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
ಶಿರಹಟ್ಟಿ ತಾಲೂಕು ಅತಿ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ದೊಡ್ಡ ಮಟ್ಟದ ಇಂಡಸ್ಟ್ರೀಸ್ ಇಲ್ಲ. ಮತ್ತು ಇಲ್ಲಿರುವ ಕಲ್ಲಿನ ಕ್ವಾರಿಗಳಿಂದ ಸರ್ಕಾರಕ್ಕೆ ಪ್ರತೀ ವರ್ಷ 20 ಕೋಟಿ ರೂ. ಆದಾಯ ಬರುತ್ತೆ. ಜೊತೆಗೆ ನೂರಾರು ಜನರಿಗೆ ಉದ್ಯೋಗ ನೀಡಲಾಗಿದೆ. ಒಂದು ವೇಳೆ ಕ್ವಾರಿಗಳು ಸ್ಥಗಿತಗೊಂಡರೆ ಅವರೆಲ್ಲ ನಿರುದ್ಯೋಗಿಗಳಾಗುತ್ತಾರೆ. ಹಾಗಾಗಿ ಮುಖ್ಯವಾಗಿ ಇರುವ ಕಪ್ಪತಗುಡ್ಡ ಅರಣ್ಯ ಗುಡ್ಡದಿಂದ ಇದು ಸುಮಾರು 10 ಕಿ.ಮೀ. ದೂರ ಇದ್ದು, ಇದರಿಂದ ಕಪ್ಪತಗುಡ್ಡಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಹೀಗಾಗಿ ಈ ವ್ಯಾಪ್ತಿಯ ಪ್ರದೇಶ ತನ್ನ ಸಂರಕ್ಷಿತ ಅರಣ್ಯ ಪ್ರದೇಶ ಕಾರ್ಯಕ್ರಮದಿಂದ ಕೈ ಬಿಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಹಲವು ಬಾರಿ ಸಚಿವರನ್ನ ಭೇಟಿ ಮಾಡಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಕಪ್ಪತಗುಡ್ಡ ಗದಗ, ಮುಂಡರಗಿ, ಶಿರಹಟ್ಟಿ ತಾಲೂಕಿನಲ್ಲಿ ಸುಮಾರು 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಭಾಗದಲ್ಲಿಯೇ ಸುಮಾರು 30ಕ್ಕೂ ಹೆಚ್ಚು ಕಲ್ಲಿನ ಕ್ವಾರಿಗಳು ಇವೆ. ಇದರಲ್ಲಿ ಹೆಚ್ಚು ಜನಪ್ರತಿನಧಿಗಳು, ಕ್ಲಾಸ್ ಒನ್ ಕಾಂಟ್ರ್ಯಾಕ್ಟರ್ಗಳು, ಉದ್ಯಮಿಗಳಿಗೆ ಸೇರಿವೆ. ಆದರೆ ಇದರಲ್ಲಿ ಒಂದು ಕಿ.ಮೀ. ವ್ಯಾಪ್ತಿಯ ಒಳಗಿರುವ ಕ್ವಾರಿಗಳನ್ನ ಸ್ಥಗಿತಗೊಳಿಸಬೇಕು ಎಂದು ನೋಟಿಸ್ ನೀಡಲಾಗಿದೆ. ಆದರೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಜಿಲ್ಲೆಯ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರಾಜೇಶ್, ಯಾರೇ ಎಷ್ಟೇ ಒತ್ತಡ ಹಾಕಿದರು ನಾವು ನಮ್ಮ ಕೆಲಸ ಮಾಡುತ್ತೇವೆ. 15 ದಿನಗಳ ಒಳಗಡೆ ಅವರು ಕ್ವಾರಿಗಳನ್ನು ಸ್ಥಗಿತಗೊಳಿಸದೆ ಇದ್ದರೆ ನಾವು ಕ್ವಾರಿಗಳನ್ನು ತೆರುವುಗೊಳಿಸುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು ಇತ್ತ ಹಲವು ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಸಹ ಕಲ್ಲು ಗಣಿಗಾರಿಕೆ ನಿಲ್ಲಿಸಲು ನಿರಂತರ ಹೋರಾಟ ಮಾಡುತ್ತಿದ್ದಾರೆ. ಈಗ ಇವರ ಲಾಬಿಗೆ ಸರ್ಕಾರ ಮಣಿಯಬಾರದು. ಅವರು ತಮ್ಮ ಸ್ವಾರ್ಥಕ್ಕಾಗಿ ಜನರ ನಿರುದ್ಯೋಗದ ಮಾತನ್ನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಮತ್ತೆ ಕಲ್ಲು ಗಣಿಗಾರಿಕೆಗೆ ಅವಕಾಶ ಕೊಟ್ಟರೆ ದೊಡ್ಡಮಟ್ಟದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.