ಗದಗ: ಲಾಕ್ಡೌನ್ಅನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಿರುವುದರಿಂದ ಜನರು ಅದನ್ನು ದುರುಪಯೋಗ ಮಾಡಿಕೊಂಡು ಅನವಶ್ಯಕವಾಗಿ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಜಿಲ್ಲೆಯಲ್ಲಿ ನಾಲ್ವರಿಗೆ ಸೋಂಕು ತಗುಲಿದೆ. ಸೋಂಕಿನಿಂದ 80 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ, ಆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಎಲ್ಲೆಂದರಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ, ಒಂದೇ ಬೈಕ್ನಲ್ಲಿ ಇಬ್ಬಿಬ್ಬರಂತೆ ಸುಖಾಸುಮ್ಮನೆ ತಿರುಗಾಡುತ್ತಿದ್ದಾರೆ. ದಿನಸಿ, ಕಿರಾಣಿ, ಮೆಡಿಕಲ್, ತರಕಾರಿ ಹೀಗೆ ಹತ್ತು ಹಲವು ನೆಪಗಳನ್ನಿಟ್ಟುಕೊಂಡು ತಿರುಗುವ ದೃಶ್ಯಗಳಂತು ಸಾಮಾನ್ಯವಾಗಿವೆ.
ಮನೆಯಲ್ಲಿರಿ, ಅನಿವಾರ್ಯ ಇದ್ರೆ ಮಾತ್ರ ಹೊರಬನ್ನಿ ಎಂದು ಅಧಿಕಾರಿಗಳು ಸಾಕಷ್ಟು ತಿಳುವಳಿಕೆ ಹೇಳಿದರೂ ಕೂಡಾ ಜನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇನ್ನು ಶಿರಹಟ್ಟಿ ಪಟ್ಟಣದಲ್ಲಿ ಲಾಕಡೌನ್ ಉಲ್ಲಂಘಿಸಿ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದು, ಕೊಂಡುಕೊಳ್ಳಲು ನಾ ಮುಂದು ತಾ ಮುಂದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದ ಸಂತೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.