ಗದಗ: 101 ದೇವಾಲಯಗಳು, 101 ಬಾವಿಗಳು ಅನ್ನೋ ಕೀರ್ತಿ ಹೊಂದಿರುವ ಐತಿಹಾಸಿಕ ಲಕ್ಕುಂಡಿ ದೇವಸ್ಥಾನಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ಪ್ರಾಚ್ಯ ವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ದೇವಾಲಯಗಳು ಅಭಿವೃದ್ಧಿ ಕಾಣದೆ ತಿಪ್ಪೆಗುಂಡಿಗಳಾಗಿ ಪರಿವರ್ತನೆಯಾಗುತ್ತಿದೆ.
ಇನ್ನೂ ಕೆಲವರು ಕಟ್ಟಿಗೆ, ಬೆರಣಿ ಇಡುವ ಸ್ಟೋರ್ ರೂಂ ಆಗಿ ಮಾರ್ಪಡಿಸಿಕೊಂಡಿದ್ದಾರೆ. ಕೆಲವರಿಗೆ ದೇವಾಲಯದ ಗೋಡೆಗಳು ಬೆರಣಿ ಉತ್ಪಾದನೆಯ ಕೇಂದ್ರಗಳಾಗಿವೆ. ಅಷ್ಟೇ ಅಲ್ಲದೆ, ಮಳೆ-ಗಾಳಿಯಿಂದ ರಕ್ಷಿಸಲು ಕಬ್ಬಿಣ ಇತ್ಯಾದಿ ವಸ್ತುಗಳನ್ನು ದೇವಾಲಯದ ಮಂಟಪದಲ್ಲಿ ಸಂಗ್ರಹಿಸುವ ರೂಢಿ ಮಾಡಿಕೊಂಡಿದ್ದಾರೆ.
ಆದರೆ, ಈ ದೇವಾಲಯಗಳನ್ನು ಸಂರಕ್ಷಿಸಬೇಕಾದ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಇತ್ತ ಗಮನ ಹರಿದುತ್ತಿಲ್ಲ. ಲಕ್ಕುಂಡಿಯನ್ನು ಮಾದರಿ ಪ್ರವಾಸಿ ತಾಣ ಮಾಡಲೆಂದು 2017ರಲ್ಲಿ ಸಿದ್ದರಾಮಯ್ಯ ಸರ್ಕಾರ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತ್ತು. ವಾರ್ಷಿಕ 3 ಕೋಟಿ ರೂ. ಬಜೆಟ್ ನೀಡುವ ಭರವಸೆ ನೀಡಲಾಗಿತ್ತು. ಆರಂಭದಲ್ಲಿ 50 ಲಕ್ಷ ರೂ. ಬಿಡುಗಡೆಯನ್ನು ಮಾಡಿತ್ತು. ಆದರೆ ಕಚೇರಿ, ಸಿಬ್ಬಂದಿ ನೇಮಕದ ಕೊರತೆಯಿಂದ ಆ ಅನುದಾನ ವಾಪಸ್ ಸರ್ಕಾರಕ್ಕೆ ಹೋಗಿತ್ತು.
ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರ 3 ಕೋಟಿ ರೂ. ಬಿಡುಗಡೆ ಮಾಡಿದೆ. ಈಗಲಾದರೂ ಲಕ್ಕುಂಡಿ ಒಂದು ಪರಿಪೂರ್ಣ ಪ್ರವಾಸಿ ತಾಣವಾಗಿ, ಐತಿಹಾಸಿಕ ವಾಸ್ತುಶಿಲ್ಪದ ಭವ್ಯ ಇತಿಹಾಸವನ್ನು ತೋರಿಸುವ ಜೀವಂತ ಮ್ಯೂಸಿಯಂ ಆಗಿ ಬದಲಾಗುವುದೇ ಎಂದು ಸ್ಥಳೀಯರು ಯೋಚನೆ ಮಾಡುತ್ತಿದ್ದಾರೆ. ಆದರೆ ಅನುದಾನ ಬಂದರೂ ಅಭಿವೃದ್ಧಿ ಕಾಣದೇ ಇರುವುದರಿಂದ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.