ಗದಗ: ಲಕ್ಷಾಂತರ ರೂ. ಮೌಲ್ಯದ ಒಣ ಮೆಣಸಿನಕಾಯಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಜಿಲ್ಲೆಯ ನರೇಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ತಿಮ್ಮಾಪುರ ಗ್ರಾಮದ ರಾಮು ಹರಣಶಿಕಾರಿ, ಗಣೇಶ ಹರಣಶಿಕಾರಿ ಮತ್ತು ರವಿ ಹರಣಶಿಕಾರಿ ಬಂಧಿತ ಆರೋಪಿಗಳು. ಜ. 10ರಂದು ರಾತ್ರಿ ವೇಳೆ ತೊಟಗಂಟಿ ಗ್ರಾಮದ ರೈತ ಕೃಷ್ಣಾ ಪಾಟೀಲ್ ಎಂಬುವರ ಜಮೀನಿನಲ್ಲಿ ಒಣ ಹಾಕಿದ್ದ ಲಕ್ಷಾಂತರ ರೂ. ಮೌಲ್ಯದ ಒಣ ಮೆಣಸಿನಕಾಯಿ ಕದ್ದು ವಾಹನದಲ್ಲಿ ಹಾಕಿಕೊಂಡು ಹೋಗುತ್ತಿದ್ದರಂತೆ. ಆಗ ರೈತ ಕೃಷ್ಣಾ ಪಾಟೀಲ್ ತಡೆದಾಗ, ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಆರೋಪಿತರು ಪರಾರಿಯಾಗಿದ್ದರು ಎನ್ನಲಾಗಿದೆ.
ಈ ಸಂಬಂಧ ನರೇಗಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ್ದ ವಾಹನ ಹಾಗೂ ಒಣ ಮೆಣಸಿನಕಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.