ಗದಗ: "ರಾಜಕೀಯ ನಿಂತ ನೀರಲ್ಲ. ಯಾರು ಎಲ್ಲಿ ಬೇಕಾದರೂ ಹೋಗಬಹುದು. ನನಗೆ ತಿಳಿದಮಟ್ಟಿಗೆ ಹದಿನೇಳು ವಲಸಿಗ ಶಾಸಕರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಒಂದು ವೇಳೆ ಹೋದರೆ ಸಚಿವ ನಾರಾಯಣ ಗೌಡ ಅವರು ಹೋಗಬಹುದು" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾರಾಯಣ ಗೌಡರ ಕಾಂಗ್ರೆಸ್ ಸೇರ್ಪಡೆ ವಿಷಯ ಅವರ ವೈಯಕ್ತಿಕ. ವಲಸಿಗ ಶಾಸಕರ ಪೈಕಿ ಅವರು ಕಾಂಗ್ರೆಸ್‌ಗೆ ಹೋದರೆ ಹೋಗಬಹುದು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಹಳ ಜನ ಬಿಜೆಪಿಗೆ ಬರುವವರಿದ್ದಾರೆ. ಇಬ್ಬರು ಹೋದರೆ 20 ಜನ ಬರುತ್ತಾರೆ. ಆದರೆ, ಸಿದ್ದರಾಮಯ್ಯ ಬಿಜೆಪಿಗೆ ಬರುತ್ತೇನೆ ಅಂದರೆ ಕರೆದುಕೊಳ್ಳಲ್ಲ" ಎಂದು ವ್ಯಂಗ್ಯವಾಡಿದರು.
"ಕಾಂಗ್ರೆಸ್ ಪಕ್ಷದವರದ್ದು ಓಲೈಕೆ ಪದ್ಧತಿ. ನಾವು ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ರೂ ಮುಸ್ಲಿಮರಿಗೆ ಮೀಸಲಿಡುವುದಾಗಿ ಹೇಳಿದ್ದರು. ಆದರೆ, ಇದು ಹಿಂದೂ ರಾಷ್ಟ್ರ. ಹಿಂದೂಗಳಿಗೆ ಇಷ್ಟು ಹಣ ಇಡುವುದಾಗಿ ಏಕೆ ಹೇಳಲಿಲ್ಲ" ಎಂದು ಪಾಟೀಲ್ ಪ್ರಶ್ನಿಸಿದರು. ಆರೆಸ್ಸೆಸ್ ಹಾಗೂ ಬಿಜೆಪಿ ಸಂವಿಧಾನದ ವಿರೋಧಿ ಎಂಬ ಆರೋಪಕ್ಕೆ ತಿರುಗೇಟು ನೀಡುತ್ತಾ, "2014 ರಿಂದ ದೇಶದ ಜನ ಬಿಜೆಪಿ ಬೆಂಬಲಿಸಿಕೊಂಡು ಬಂದಿದ್ದಾರೆ. 2019ರಲ್ಲಿ ಅದಕ್ಕಿಂತ ಹೆಚ್ಚು ಸೀಟುಗಳನ್ನು ನೀಡಿದ್ದಾರೆ. ಜನರ ಭಾವನೆಗಳಿಗಿಂತ ಇವರ ಭಾವನೆಗಳೇ ಜಾಸ್ತಿಯಾಯಿತೇ? ಕಾಂಗ್ರೆಸ್ ಪಕ್ಷದ ನಾಯಕರು ಸಂವಿಧಾನವನ್ನು ತಾವೇ ರೂಪಿಸಿರುವ ರೀತಿ ಮಾತನಾಡುತ್ತಾರೆ. ಕೇವಲ ಹಾಗೆ ಮಾತನಾಡಿದರೆ ಆಗಲ್ಲ. ಸಂವಿಧಾನವನ್ನು ಪ್ರೀತಿಸಬೇಕು. ಹಾಗೆ ಮಾಡಿದ್ದರಿಂದಲೇ ಮತದಾರರು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಗೆ ಆಶೀರ್ವದಿಸಿದ್ದಾರೆ" ಎಂದು ಪಕ್ಷವನ್ನು ಸಮರ್ಥಿಸಿಕೊಂಡರು.
ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರಿಗೆ ಬಿಜೆಪಿ ರಕ್ಷಣೆ ನೀಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, "ಯಾವ ರಕ್ಷಣೆಯೂ ಇಲ್ಲ, ಏನೂ ಇಲ್ಲ. ಹಾಗಿದ್ದರೆ ಲೋಕಾಯುಕ್ತ ಸಂಸ್ಥೆಯಿಂದ ನಾವು ರಕ್ಷಣೆ ಕೊಡಬಹುದಿತ್ತು. ಲೋಕಾಯುಕ್ತ ಇಂದು ನಿಷ್ಪಕ್ಷವಾಗಿ ಕೆಲಸ ಮಾಡುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಲೋಕಾಯುಕ್ತವನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದ್ದರು. ಅವರ ಮೇಲೆ ಬಂದ ರಿಡೂ ಅನ್ನುವ 8 ಸಾವಿರ ಕೋಟಿ ರೂ ಹಗರಣವನ್ನು ಮುಚ್ಚಿಕೊಳ್ಳಲು ಎಸಿಬಿ ರಚಿಸಿದರು."
"ನಾವು ರಕ್ಷಣೆ ಮಾಡುವ ಹಾಗಿದ್ದರೆ ಅದೇನು ದೊಡ್ಡ ವಿಷಯವಲ್ಲ. ಆದರೆ, ನಾವು ಹಾಗೆ ಮಾಡುವುದಿಲ್ಲ. ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆ ಆಗಲಿ. ಸಂಪೂರ್ಣ ಸ್ವಾತಂತ್ರ್ಯವನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ. ಸಾಂವಿಧಾನಿಕ ಸಂಸ್ಥೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ವಿರೂಪಾಕ್ಷಪ್ಪ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಲುಕೌಟ್ ನೋಟಿಸ್ ನೀಡಲಾಗಿದೆ. ನಮಗೆ ಕೆಲಸವಿದೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಕೆಲಸವಿಲ್ಲ. ಅವರು ಸದ್ಯ ನಿರುದ್ಯೋಗಿಗಳು. ಹೀಗಾಗಿ ಹಾದಿ-ಬೀದಿ ರಂಪ ಮಾಡಿಕೊಂಡು ಸ್ಟ್ರೈಕ್ ಮಾಡುತ್ತಾ, ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬರುವುದೇ ಗ್ಯಾರಂಟಿ ಇಲ್ಲ. ಇನ್ನು ಆ ಗ್ಯಾರಂಟಿ, ಈ ಗ್ಯಾರಂಟಿ ಅಂತ ಪುಕ್ಕಟೆ ಗ್ಯಾರಂಟಿ ಕೊಡುತ್ತಿದ್ದಾರೆ" ಎಂದು ಸಚಿವರು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷದಿಂದ ರಾಜ್ಯ ಎರಡು ಗಂಟೆ ಬಂದ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಮೊದಲೇ ಹೇಳಿದಂತೆ ಅವರು ನಿರುದ್ಯೋಗಿಗಳು. ಹಾಗಾಗಿ ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ನಾವು ಬದುಕಿದ್ದೇವೆ ಅಂತ ತೋರಿಸಿಕೊಳ್ಳಲು ಎರಡು ಗಂಟೆ ಬೀದಿಯಲ್ಲಿ ಧರಣಿ ಮಾಡುತ್ತಾರೆ" ಎಂದರು.
ಇದನ್ನೂ ಓದಿ: ವಿಜಯ ಸಂಕಲ್ಪ ಯಾತ್ರೆಗೆ ಪ್ರತಿಭಟನೆ ಬಿಸಿ: ಗುತ್ತೇದಾರ್ ಸಹೋದರರಿಂದ ಟಿಕೆಟ್ ಪೈಪೋಟಿ