ಗದಗ: ಪ್ರಧಾನಿ ಮೋದಿ ಅವರು ತೋರಿಸುವ ತಪ್ಪು ದಾರಿಯನ್ನೇ ಇಲ್ಲಿನ ಬಿಜೆಪಿ ನಾಯಕರು ಮತ್ತು ಸಿ.ಸಿ.ಪಾಟೀಲ್ ತುಳಿಯುತ್ತಿದ್ದಾರೆ ಎಂದು ಶಾಸಕ ಎಚ್.ಕೆ.ಪಾಟೀಲ್ ಕಿಡಿಕಾರಿದರು.
ಸಿಎಎ ಕಾನೂನು ಸಂವಿಧಾನಾತ್ಮಕವಾಗಿ ಹೇಗೆ ಸರಿಯಾಗಿಲ್ಲ ಅನ್ನೋದನ್ನು ನಾವು ರಾಜಕಾರಣಿಗಳು ಹೇಳುವುದಲ್ಲ. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಸೇನ್ ಈ ಬಗ್ಗೆ ಮಾತನಾಡಿದ್ದಾರೆ. ಅದನ್ನು ಬಿಜೆಪಿಯ ನಾಯಕರು ಗಮನಿಸಬೇಕು ಹಾಗು ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಧಾರ್ಮಿಕ ನೆಲೆಯಲ್ಲಿ ಜನರನ್ನು ಪ್ರತ್ಯೇಕಿಸುವಂತಹ ಕಾನೂನು ಪ್ರಪಂಚದ ಯಾವ ದೇಶದಲ್ಲಾದ್ರೂ ಆಗಿದ್ದಿದ್ದರೆ ಅದು ಭಾರತದಲ್ಲಿ ಜಾರಿ ಮಾಡೋಕೆ ಸಾಧ್ಯವಿಲ್ಲ. ನಮ್ಮದು ಜಾತ್ಯಾತೀತ ರಾಷ್ಟ್ರ. ಸಂವಿಧಾನದ ಆಶಯವೇ ಎಲ್ಲರೂ ಸಮಾನರು ಎನ್ನುವುದು. ಆದರೆ, ಸಂವಿಧಾನಕ್ಕೆ ದ್ರೋಹ ಎಸಗಿ ಸಿಎಎ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ರಾಷ್ಟ್ರದಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗಲು ಬಿಜೆಪಿಯೇ ಕಾರಣ ಎಂದು ಹೇಳಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ನವರು 20 ವರ್ಷ ಅಂಗಿಯನ್ನು ಗೂಟಕ್ಕೆ ಹಾಕಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದನ್ನು ಗೂಟಕ್ಕೆ ಹಾಕುತ್ತಾರೋ ಗೊತ್ತಿಲ್ಲ. ದೇಶದಲ್ಲಿ ಶೇ.70 ಇದ್ದ ಬಿಜೆಪಿ ಈಗ ಶೇ. 25ಕ್ಕೆ ಬಂದಿದ್ದು ಅರ್ಧಕ್ಕರ್ಧ ಕಡಿಮೆಯಾಗಿದ್ದು ಕಣ್ಣಿಗೆ ಕಾಣುತ್ತಿದೆ ಎಂದು ಹೇಳಿದರು.
ಪ್ರೊಜೆಕ್ಷನ್ ಮುಂದುವರಿಸಿಕೊಂಡು ಹೋಗಬೇಕು. ಆಗ ಯಾರು ಶೂನ್ಯ ಎಂಬುದು ಗೊತ್ತಾಗಲಿದೆ. ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಬಿಜೆಪಿಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಎಂಥ ಪರಿಸ್ಥಿತಿ ಬಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮುಂದೆ ದೆಹಲಿ ಚುನಾವಣೆಯಲ್ಲಿ ಏನಾಗುತ್ತೆ ಎಂದು ನೋಡುತ್ತೀರಿ ಎಂದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ಸ್ಥಾನಕ್ಕೆ ಯೋಗ್ಯರಾದ ಸಾಕಷ್ಟು ನಾಯಕರು ಪಕ್ಷದಲ್ಲಿ ಇದ್ದಾರೆ. ಅವರೆಲ್ಲರನ್ನು ಗಮನಿಸಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದರು.