ಗದಗ: ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿವೊಂದು ಮದುವೆ ಮಾಡಿಕೊಂಡಿದ್ದು, ತಮಗೆ ರಕ್ಷಣೆ ನೀಡುವಂತೆ ಎಸ್ಪಿ ಮೊರೆ ಹೋಗಿದ್ದಾರೆ. ಯುವತಿಯ ತಾಯಿ ಪಿಎಸ್ಐ, ತಂದೆ ಹವಾಲ್ದಾರ್ ಆಗಿದ್ದು, ಇವರಿಂದ ತಮಗೆ ತೊಂದರೆ ಆಗಬಹುದೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.
ರಾಜೀವ್ ಗಾಂಧಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರೇಣುಕಾ ಮುಂಡೆವಾಡಗಿ ಪ್ರೀತಿ ಮಾಡಿ ಮದುವೆಯಾಗಿರುವ ತನ್ನ ಏಕೈಕ ಮಗಳಿಗೆ ಜೀವ ಬೆದರಿಕೆ ಹಾಕಿದ್ದಾರಂತೆ. ಹೀಗಂತ ಮಗಳು ಮೇಘಾ ದೂರು ನೀಡಿದ್ದಾಳೆ. ಇವರ ತಾಯಿ ರೇಣುಕಾ ಪಿಎಸ್ಐ ಹಾಗೂ ತಂದೆ ರಮೇಶ್ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದು, ತಮಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾಳೆ. ಹೀಗಾಗಿ ಜೀವ ರಕ್ಷಣೆ ನೀಡುವಂತೆ ಎಸ್ಪಿ ಮೊರೆ ಹೋಗಿದ್ದಾರೆ.
ಮೇಘಾ ಕಳೆದ ಆರು ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಕೀರ್ತನಾಥ ಎಂಬ ಯುವಕನ ಜೊತೆ ಸಬ್ ರಿಜಿಸ್ಟರ್ ಮೂಲಕ ಮದುವೆಯಾಗಿದ್ದಾರೆ. ಆದರೆ ಪಿಎಸ್ಐ ಆಗಿರುವ ತಾಯಿ ಮತ್ತು ಅಗ್ನಿಶಾಮಕ ದಳದಲ್ಲಿ ಹವಾಲ್ದಾರ್ ಆಗಿರುವ ತಂದೆ ನಮ್ಮನ್ನ ಕೊಲ್ಲುತ್ತೇವೆ ಅಂತ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಮಗೆ ರಕ್ಷಣೆಬೇಕು ಎಂದು ಗದಗ ಎಸ್ಪಿ ಎನ್. ಯತೀಶ್ ಅವರ ಮೊರೆ ಹೋಗಿದ್ದಾರೆ.
ಈ ಜೋಡಿ ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡಿದ್ದರಂತೆ.ಇಬ್ಬರ ವಿಷಯ ಎರಡು ಮನೆಯವರಿಗೆ ತಿಳಿದಿತ್ತು. ಆದರೆ ಮದುವೆಯಾಗಲು ವಿರೋಧ ವ್ಯಕ್ತಪಡಿಸಿದ್ದರು. ಬೇರೆ ಬೇರೆ ಜಾತಿಯವರಾಗಿರುವ ಕಾರಣ ಈ ವಿರೋಧ ವ್ಯಕ್ತವಾಗಿದೆ. ಇದರ ಮಧ್ಯೆ ಲಾಕ್ಡೌನ್ ಸಂದರ್ಭದಲ್ಲಿ ಯುವತಿ ಮೇಘಾಳಿಗೆ ಪೋಷಕರು ಬೇರೆ ಕಡೆ ಸಂಬಂಧ ಕೂರಿಸಲು ಸಜ್ಜಾಗಿದ್ದರಂತೆ. ಆದರೆ ಇದಕ್ಕೆ ಮೇಘಾ ವಿರೋಧ ವ್ಯಕ್ತಪಡಿಸಿ,ಮನೆ ಬಿಟ್ಟು ಹೋಗಿದ್ದಳು.
ಇದನ್ನೂ ಓದಿರಿ: ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ... ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಜೋಶಿ
ಡಿಸೆಂಬರ್ 2, 2020 ರಂದು ಮದುವೆ ಮಾಡಿಕೊಂಡಿದ್ದ ಈ ಜೋಡಿ ಬಳಿಕ ಮುಂಡರಗಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಜನವರಿ 5ರಂದು ರಿಜಿಸ್ಟರ್ ಮಾಡಿಸಿದ್ದಾರೆ. ಇದಾದ ಬಳಿಕ ಗೋವಾದಲ್ಲಿ ತಂಗಿದ್ದರು. ಈ ವೇಳೆ ಪದೇ ಪದೇ ಬೆದರಿಕೆ ಕರೆಗೆಳು ಬಂದಿವೆ. ಹೀಗಾಗಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಆದರೆ ಇದೀಗ ಊರಿಗೆ ಬರಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಇಲ್ಲಿ ಎಲ್ಲರೂ ಬೆದರಿಕೆ ಹಾಕ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಬೆಳಗಾವಿಗೆ ಹೋಗಿ ಐಜಿಯವರಲ್ಲಿ ರಕ್ಷಣೆ ಕೋರಿ ಮನವಿ ಮಾಡಿದ್ದರು. ಇದೀಗ ಗದಗ ಎಸ್ಪಿ ರಕ್ಷಣೆ ಕೋರಿದ್ದಾರೆ. ಇವರ ಮನವಿಗೆ ಸ್ಪಂದಿಸಿರುವ ಅವರು ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ.