ಗದಗ: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಡಯಾಬಿಟಿಸ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಲಕ್ಕುಂಡಿ ಗ್ರಾಮದ 44 ವರ್ಷದ ವ್ಯಕ್ತಿ ಬೆಟಗೇರಿ ಇಎಸ್ಐ ಆಸ್ಪತ್ರೆಯಲ್ಲಿ ಐದು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ. ಬಳಿಕ ಆತನ ಆರೋಗ್ಯದಲ್ಲಿ ಚೇತರಿಕೆಯಾಗದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿತ್ತು. ಅಲ್ಲಿ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೊದಲು ಬೆಟಗೇರಿಯ ಇಎಸ್ಐ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಸೋಂಕಿತನಿದ್ದ ಕೊಠಡಿ ಮಾತ್ರ ಕಾಟಾಚಾರಕ್ಕೆ ಸೀಲ್ ಮಾಡಿ ಆರೋಗ್ಯ ಇಲಾಖೆ ಕೈ ತೊಳೆದುಕೊಂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇನ್ನು ಆಸ್ಪತ್ರೆಯ ನರ್ಸ್, ಡಾಕ್ಟರ್ ಮತ್ತು 22 ಜನರನ್ನು ಸಹ ಹೊಂ ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆದ ಪಕ್ಕದ ರೂಂನಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದಾರೆ. ಈ ನಡೆಗೆ ಗದಗ-ಬೆಟಗೇರಿ ಅವಳಿ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.