ಗದಗ : 'ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ' ಎಂಬ ವಿಶ್ವಮಾನವ ಸಂದೇಶ ಸಾರಿದ ಯೋಗಿ ಹಾಗೂ ತಪಸ್ವಿ ಲಿಂ.ವೀರಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಳಿ ಇರುವ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗೆ ಭೂಮಿ ಪೂಜೆ ಹಾಗೂ ಶಿವಲಿಂಗ ಸ್ಥಾಪನೆಯ ಪೂಜಾಕಾರ್ಯ ನೆರವೇರಿಸಲಾಗಿದೆ.
ಮಹೋನ್ನತ ಕಾರ್ಯವನ್ನು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ಅಶೀರ್ವಾದದೊಂದಿಗೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮತ್ತು ಮುಕ್ತಿಮಂದಿರದ ಪೀಠಾಧ್ಯಕ್ಷ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರ ನೇತೃತ್ವದಲ್ಲಿ ನಡೆಸಲಾಯಿತು.
ಇದನ್ನೂ ಓದಿ : ಕೊಪ್ಪಳ: ನಿಧಿಗಾಗಿ ಶಿವಲಿಂಗವನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು
ಹೋಮ-ಹವನ ನಾಡಿನ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ರಾಜಕೀಯ ಮುಖಂಡರು ಮತ್ತು ಭಕ್ತರ ಸಮ್ಮುಖದಲ್ಲಿ ವಿಧಿ-ವಿಧಾನಗಳು ನಡೆದವು. ತದನಂತರ ಧರ್ಮ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಮನಿಪ್ರ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ, "ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಸ್ಥಾಪಿತವಾಗುವ ಮೂರು ಕೋಟಿ ಲಿಂಗಗಳಿಗೆ ದಿನನಿತ್ಯ ಅಭಿಷೇಕ ನಡೆಸಲಾಗುವುದು. ಬಸವನ ಮುಖದಿಂದ ನೀರು ಬೀಳುವ ವ್ಯವಸ್ಥೆ ಮಾಡಲಿದ್ದು, ತ್ರಿಕೋಟೇಶ್ವರ ತೀರ್ಥ ಸ್ಥಾನ ವ್ಯವಸ್ಥೆ ಮಾಡಲಾಗುವುದು. ಹನ್ನೊಂದು ತಿಂಗಳಲ್ಲಿ ಈ ಕಾರ್ಯ ಮುಗಿಯಲಿದೆ. ಇನ್ನು ಮುಂದೆ ಮಠದಲ್ಲಿ ದಿನನಿತ್ಯ ದಾಸೋಹ ನಡೆಯಲಿದೆ. ಮಠದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು" ಎಂದು ಮನವಿ ಮಾಡಿದರು.
ಇದನ್ನೂ ಓದಿ : 7 ಲಕ್ಷ ರುದ್ರಾಕ್ಷಿ ಮಣಿಗಳಿಂದ ನಿರ್ಮಾಣಗೊಂಡ ಶಿವಲಿಂಗ ! ನೋಡಿ
"ಲಕ್ಷ್ಮೇಶ್ವರದ ಮುಕ್ತಿ ಮಂದಿರದಲ್ಲಿ ಈಗಾಗಲೇ ಲಕ್ಷಕ್ಕೂ ಹೆಚ್ಚು ಶಿವಲಿಂಗಗಳು ಭಕ್ತರು ಕಣ್ಣಿಗೆ ಕಾಣಿಸುತ್ತಿವೆ. ಮುಂದಿನ ದಿನಗಳಲ್ಲಿ ಭಕ್ತರ ಸಹಕಾರದಿಂದ 3 ಕೋಟಿ ಲಿಂಗಗಳನ್ನು ಸುಮಾರು 50 ಎಕರೆ ಪ್ರದೇಶದಲ್ಲಿ ಸ್ಥಾಪಿಸುವ ಸಂಕಲ್ಪ ಮಾಡಲಾಗಿದೆ. ಶಿವಲಿಂಗ ಸ್ಥಾಪನೆ ಕಾರ್ಯಗಳು ಭರದಿಂದ ಜರುಗಲಿವೆ" ಎಂದು ಸ್ವಾಮೀಜಿ ಮಾಹಿತಿ ನೀಡಿದರು.
ಇದನ್ನೂ ಓದಿ : ಉಪವಾಸ ವ್ರತ ಮಾಡಿದರೂ ಈಡೇರದ ಮದುವೆ ಆಸೆ : ದೇವಸ್ಥಾನದಿಂದ ಶಿವಲಿಂಗ ಕದ್ದ ಯುವಕ!
ಭೂಮಿ ಪೂಜೆ ಕಾರ್ಯಕ್ರಮಕ್ಕೆ ನಾಡಿನ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮುಕ್ತಿಮಂದಿರ ಧರ್ಮ ಕ್ಷೇತ್ರದ ಷಾ ಬ್ರ ವಿಮಲರೇಣುಕ ವೀರಮುಕ್ತಿಮುನಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ನಾಡಿನ ವಿವಿಧ ಮಠಾಧೀಶರು ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ವಿವಿಧ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ : 5 ಲಕ್ಷ ರುದ್ರಾಕ್ಷಿಯಿಂದ ಮೈದಳೆದ 21 ಅಡಿ ಎತ್ತರದ ಶಿವಲಿಂಗ : ವಿಡಿಯೋ