ಗದಗ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋಡೌನ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.
ಸುಮಾರು 13 ಲಕ್ಷ ರೂ. ಮೌಲ್ಯದ ಅಂದಾಜು ಸಾವಿರಕ್ಕೂ ಅಧಿಕ ಚೀಲ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ರವಿಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಇಲ್ಲಿನ ಕಟ್ಟಡವೊಂದರಲ್ಲಿ ಖದೀಮರು ಅಕ್ಕಿಯನ್ನು ಸಂಗ್ರಹಿಸಿ ಇಟ್ಟಿದ್ದರು. ಖದೀಮರಿಗೆ ಬಲೆ ಬಿಸಿದ ಪೊಲೀಸರು, ತಹಶೀಲ್ದಾರ ಅಶೋಕ ಕಲಘಟಗಿ, ಆಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ ಹಾಗೂ ಪಿಎಸ್ಐ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಇದನ್ನು ಓದಿ: ಹೆಂಡತಿ ಕೊಂದು ಪರಾರಿಯಾಗಿದ್ದ ಪತಿ ನೇಣಿಗೆ ಶರಣು : ಎರಡೇ ದಿನದಲ್ಲಿ 3 ಮಕ್ಕಳು ಅನಾಥ
ಇನ್ನು ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿದ್ದ ಆರೋಪಿಗಳು ಯಾರು ಎಂಬುದು ಸದ್ಯ ತಿಳಿದು ಬಂದಿಲ್ಲ. ಅಷ್ಟೊಂದು ಪಡಿತರ ಅಕ್ಕಿ ಚೀಲಗಳು ಹೇಗೆ ಸಂಗ್ರಹವಾಗಿವೆ. ಅದರ ಹಿಂದೆ ಯಾರು ಇದ್ದಾರೆ ಎಂಬುದು ಪೋಲೀಸರ ತನಿಖೆಯ ನಂತರ ಬಯಲಿಗೆ ಬರಬೇಕಿದೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.