ಗದಗ : ಮಾಂಸಾಹಾರಿ ಹೋಟೆಲ್ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದ್ದಲ್ಲದೇ ಅಲ್ಲಿಯೇ ಕುಡಿಯಲು ಅವಕಾಶ ನೀಡಿದ್ದಕ್ಕಾಗಿ ಹೋಟೆಲ್ವೊಂದರ ಮಾಲೀಕಳ ಮೇಲೆ ಅಬಕಾರಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ನಗರದ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ಜೂಮ್ಮನ್ ಎಂಬ ಹೋಟೆಲ್ ಮೇಲೆ ಕಳೆದ ಒಂದು ವಾರದಲ್ಲಿ ಎರಡು ಬಾರಿ ದಾಳಿ ನಡೆದಿದ್ದು, ಹೋಟೆಲ್ ಮಾಲೀಕಳಾದ ಅಂಬಿಕಾ ಲಕ್ಷ್ಮಣ್ ಕಬಾಡಿ ಅವರನ್ನು ಬಂಧಿಸಲಾಗಿತ್ತು. ಈಗ ಬೇಲ್ ಮೇಲೆ ಮತ್ತೆ ಬಿಡುಗಡೆಯಾಗಿದ್ದಾರೆ.
ಫೋನ್ ಮೂಲಕ ಸಾರ್ವಜನಿಕರು ಸಲ್ಲಿಸಿದ ದೂರಿನ ಆಧಾರದಲ್ಲಿ ಆ. 25 ಮತ್ತು ಆ. 30ರಂದು ದಾಳಿ ನಡೆಸಲಾಗಿತ್ತು. ಆ. 25ರಂದು ಹೋಟೆಲ್ ಮೇಲೆ ದಾಳಿ ನಡೆಸಿ ಮಾಲೀಕರನ್ನು ಬಂಧಿಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಆ ನಂತರವೂ ಈಗ ಅದೇ ದಂಧೆಯನ್ನು ಮುಂದುವರೆಸಿದ ದೂರುಗಳು ಬಂದ ಹಿನ್ನೆಲೆ ಆ. 30 ರಂದು ಮತ್ತೆ ದಾಳಿ ನಡೆಸಲಾಗಿತ್ತು. ಆವಾಗಲೂ ಎಣ್ಣೆ ಸರಬರಾಜು ಮತ್ತು ಅಲ್ಲೇ ಕುಡಿಯಲು ಅವಕಾಶ ಕೊಟ್ಟಿರುವುದು ಕಂಡು ಬಂದಿದ್ದರಿಂದ ಮತ್ತೊಮ್ಮೆ ಅಂಬಿಕಾ ಅವರನ್ನು ಬಂಧಿಸಲಾಗಿತ್ತು. ಇದೀಗ ಸ್ಟೇಷನ್ ಬೇಲ್ ಮೇಲೆ ಮತ್ತೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದಾಳಿ ವೇಳೆ ವಿವಿಧ ಬ್ರ್ಯಾಂಡ್ಗಳ ಮದ್ಯದ ಟೆಟ್ರಾ ಪ್ಯಾಕೇಟುಗಳು ದೊರೆತಿವೆ. ಅಬಕಾರಿ ಇಲಾಖೆಯ ಅಧಿಕಾರಿಗಳಾದ ಗಜಕೋಶ್ ಮತ್ತು ಸೈನಾಜ್ ಬೇಗಂ ನೇತೃತ್ವದಲ್ಲಿ ಪ್ರತ್ಯೇಕ ದಾಳಿ ನಡೆಸಿ ದೂರು ದಾಖಲಿಸಿಕೊಳ್ಳಲಾಗಿದೆ.
ಈ ವಿಷಯವಾಗಿ ಈಟಿವಿ ಭಾರತದ ಜೊತೆ ಮಾತನಾಡಿದ ಇಲ್ಲಿನ ಅಬಕಾರಿ ಡಿಸಿ ಮೋತಿಲಾಲ್, ಸಾರ್ವಜನಿಕರಿಂದ ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ನಮ್ಮ ಸಿಬ್ಬಂದಿ ದಾಳಿ ಮಾಡಿ ಕ್ರಮ ಕೈಗೊಂಡಿದ್ದಾರೆ ಅಂತಾ ಹೇಳಿದ್ದಾರೆ.