ಗದಗ: ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಜೊತೆಗೆ ದಿನೇ ದಿನೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಶಾಸಕ ಹೆಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.
ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿರುವ ಅವರು, ಕೊರೊನಾ ಮಾರಿಯಿಂದಾಗಿ ರಾಜ್ಯದ ಜನ ವಿಲ ವಿಲ ಒದ್ದಾಡುತ್ತಿದ್ದಾರೆ. ಪ್ರತಿದಿನ 2 ಸಾವಿರಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. 40ರಿಂದ 50 ಜನ ಪ್ರತಿದಿನ ಸಾವಿಗೀಡಾಗುತ್ತಿದ್ದಾರೆ. ಸರ್ಕಾರದ ನಿಷ್ಕ್ರಿಯ ಕೆಲಸ ಮತ್ತು ಅಪ್ರಾಮಾಣಿಕತೆ, ಸಮನ್ವಯದ ಕೊರತೆಯಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸರಿಯಾದ ಅಂಬ್ಯಲೆನ್ಸ್ ವ್ಯವಸ್ಥೆ ಇಲ್ಲದೆ ರೋಗಿಗಳು ಬಲಿಯಾಗುತ್ತಿದ್ದಾರೆ. ಆಸ್ಪತ್ರೆಗಳಿಗೆ ಹೋದರೆ ಹಾಸಿಗೆ ಕೊರತೆ, ಉತ್ತಮ ಗುಣಮಟ್ಟದ ಚಿಕಿತ್ಸೆ ಇಲ್ಲ. ಮೃತಪಟ್ಟವರಿಗೆ ಗೌರವಯುತ ಶವ ಸಂಸ್ಕಾರ ನಡೆಯುತ್ತಿಲ್ಲ. ಶವಗಳನ್ನು ತ್ವರಿತಗತಿಯಲ್ಲಿ ಸಂಬಂಧಿಕರಿಗೆ ನೀಡುತ್ತಿಲ್ಲ. ಇವೆಲ್ಲಾ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿದ್ದಾರೆ.