ಗದಗ: ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಬಗ್ಗೆ ಈಗಾಗಲೇ ಗಂಭೀರ ಚಿಂತನೆ ನಡೆದಿದ್ದು, ತಾತ್ವಿಕವಾಗಿ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ವೇಳೆ ನಗರದಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಸರೋಜಿನಿ ಮಹಿಷಿ ವರದಿ ಸಂಪೂರ್ಣವಾಗಿ ಅನುಷ್ಠಾನ ಆಗದೆ ಇರೋದಕ್ಕೆ ಹಲವು ತೊಂದರೆಗಳಿವೆ. ಆ ತೊಂದರೆಗಳನ್ನು ನಿವಾರಣೆ ಮಾಡಿ ನಮ್ಮ ಕನ್ನಡಿಗರಿಗೆ ಕೆಲಸ ಕೊಡುವ ಗಂಭೀರ ಚಿಂತನೆ ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ಮಹಿಷಿ ವರದಿ ಮುಖ್ಯಾಂಶಗಳನ್ನು ಗಮನದಲ್ಲಿಟ್ಟುಕೊಂಡು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನೀತಿಯನ್ನು ರಚಿಸಲಾಗುವುದು ಎಂದರು.
ಇನ್ನು ಮಹದಾಯಿ ವಿಚಾರ ಕುರಿತು ಮಾತನಾಡಿ, ಮಹದಾಯಿ ಪ್ರಕರಣಗಳಲ್ಲಿ ಒಂದು ಟ್ರಿಬ್ಯೂನಲ್ ಮುಂದಿದೆ, ಮತ್ತೊಂದು ಸುಪ್ರೀಂ ಕೋರ್ಟ್ ಮುಂದಿದೆ. ಇದುವರೆಗೂ ಯಾವ ಸರ್ಕಾರವು ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿರಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ನಂತರ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿದೆ. ಹೇಳಿಕೆ ನೀಡಲು ಅವಕಾಶ ಮಾಡಿಕೊಡಲಾಗಿದೆ. ಇದೇ ತಿಂಗಳಲ್ಲಿ ವಿಚಾರಣೆ ನಡೆಯಲಿದ್ದು, ಕಾನೂನಾತ್ಮಕವಾದ ಎಲ್ಲಾ ಹೋರಾಟಗಳನ್ನು ಮಾಡಲು ಸಿದ್ಧರಿದ್ದೇವೆ ಎಂದು ಉತ್ತರಿಸಿದರು.
ಪೊಲೀಸ್ ಇಲಾಖೆಗೆ ಸಂಬಧಿಸಿದಂತೆ ಹಲವಾರು ಸುಧಾರಣೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪೊಲೀಸ್ ಸಿಬ್ಬಂದಿ ಮಕ್ಕಳಿಗಾಗಿ ಮತ್ತು ವಸತಿ ಬಗ್ಗೆ ಹೊಸ ಯೋಜನೆಯನ್ನು ಈ ಬಾರಿಯ ಬಜೆಟ್ನಲ್ಲಿ ಘೋಷಿಸಲು ಮುಖ್ಯಮಂತ್ರಿ ಬಳಿ ಬೇಡಿಕೆ ಇಟ್ಟಿದ್ದೇವೆ. ಬಹುತೇಕ ಬೇಡಿಕೆಗಳು ಈಡೇರುವಂತ ವಿಶ್ವಾಸ ಇದೆ ಎಂದು ಗೃಹ ಸಚಿವವರು ತಿಳಿಸಿದರು.