ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮತ್ತೆ ಅವಾಂತರ ಸೃಷ್ಟಿಸಿದೆ. ಪ್ರವಾಹದ ಹೊಡೆತಕ್ಕೆ ನೂರಾರು ಕುಟುಂಬಗಳು ಮನೆ ಕಳೆದುಕೊಂಡು ನಡು ಬೀದಿಗೆ ಬರುವಂತಾಗಿದೆ.
ಇವರತ್ತ ಗಮನಹರಿಸಬೇಕಾಗಿದ್ದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಕ್ಕೆ ಇಲ್ಲಿನ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ನವಿಲು ತೀರ್ಥ ಡ್ಯಾಂನ ಆಸುಪಾಸಿನ ಗ್ರಾಮಗಳ ಹಲವು ಗ್ರಾಮಗಳು ಒಂದೊಂದಾಗಿ ಜಲಾವೃತವಾಗುತ್ತಿವೆ.
ಭಾರಿ ಮಳೆಯಿಂದಾಗಿ ನವಿಲು ತೀರ್ಥ ಡ್ಯಾಂ ಭರ್ತಿಯಾಗಿದ್ದು, ಸಾವಿರಾರು ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಮಲಪ್ರಭ ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಲಪ್ರಭ ನದಿಯ ಅಬ್ಬರಕ್ಕೆ ಕೊಣ್ಣೂರು ಗ್ರಾಮದ ಜಾಡರ್ ಓಣಿಯಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ಅಪಾರ ನೀರು ನುಗ್ಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳೆಲ್ಲ ನೀರುಪಾಲಾಗಿದ್ದು, ಊರಿನಲ್ಲಿ ಸಿಲುಕಿದವರ ಸ್ಥಳಾಂತರಕ್ಕೆ ಹರಸಾಹಸ ಪಡಬೇಕಾಯಿತು.
ಈ ನಡುವೆ ವೃದ್ಧೆಯೊಬ್ಬರು ಮನೆಯನ್ನು ಬಿಟ್ಟು ಬರಲು ನಿರಾಕರಿಸಿದರಿಂದಾಗಿ ಒತ್ತಾಯ ಪೂರ್ವಕವಾಗಿ ಆಕೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಬರಬೇಕಾಯಿತು.
ಕೊಣ್ಣೂರು ಗ್ರಾಮದ ಹೊಳೆ ಅಗಸಿ ಭಾಗದಲ್ಲೂ 40ಕ್ಕೂ ಅಧಿಕ ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆ ನಮಗೆ ಶಾಶ್ವತ ಪರಿಹಾರ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.
ಕೊಣ್ಣೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-218 ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಹುಬ್ಬಳ್ಳಿ-ವಿಜಯಪುರ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಸಂಪರ್ಕ ಕಡಿತಗೊಂಡಿದೆ. ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಬದಲಿ ಮಾರ್ಗವಾಗಿ ರೋಣ-ಬಾಗಲಕೋಟೆ ಮೂಲಕ ವಾಹನಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಇನ್ನು ಕಳೆದ ಬಾರಿಯ ಪ್ರವಾಹದಲ್ಲಿ ಕೊಣ್ಣೂರಿನ ಸೇತುವೆ ಸಂಪೂರ್ಣ ಜಖಂ ಆಗಿತ್ತು. ಬಳಿಕ ಅಧಿಕಾರಿಗಳ ಸೇತುವೆ ನಿರ್ಮಾಣದ ಮಾತನಾಡಿದ್ದರು. ಸೇತುವೆ ನಿರ್ಮಾಣಕ್ಕೆ ಹಣ ಮಂಜೂರಾದರೂ ಕಾಮಗಾರಿ ಮಾತ್ರ ನಡೆದಿರಲಿಲ್ಲ. ಈ ಸೇತುವೆ ನಿರ್ಮಾಣವಾಗಿದ್ದರೆ ಜನರ ಓಡಾಟಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.
ಇತ್ತ ಕೊಣ್ಣೂರು ಗ್ರಾಮದ ಪಕ್ಕದ ಹಳೇ ಬೂದಿಹಾಳ ಕೂಡ ನಡುಗಡ್ಡೆಯಾಗಿದೆ. ಗ್ರಾಮದಲ್ಲಿ ಇದ್ದ ಹಲವು ಕುಟುಂಬಗಳು ನಿನ್ನೆಯೇ ಹೊಸ ಬೂದಿಹಾಳ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಕೊಣ್ಣೂರು, ಬೂದಿಹಾಳ, ವಾಸನ ಗ್ರಾಮಗಳ ವ್ಯಾಪ್ತಿಯ ತೋಟ, ಹೊಲಗಳಲ್ಲಿ ಪ್ರವಾಹದ ನೀರು ನಿಂತಿದೆ. ಇದರಿಂದ ರೈತರು ವರ್ಷ ಪೂರ್ತಿ ಬೆವರು ಸುರಿಸಿ ಬೆಳೆದಿದ್ದ ಬೆಳೆಗಳು ಪ್ರವಾಹಕ್ಕೆ ಸಿಲುಕಿ ನಾಶವಾಗಿವೆ.
ನರಗುಂದ ತಾಲೂಕಿನಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದರೂ ಸಂಕಷ್ಟದಲ್ಲಿದ್ದ ನಮ್ಮ ಭಾಗಕ್ಕೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.