ಗದಗ: ಬೈಕ್ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಬಾಲಕಿ ಸ್ಥಳದಲ್ಲೇ ಸಾವುನ್ನಪ್ಪಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಟಿಪ್ಪರ್ವೊಂದು ಬೈಕ್ಗೆ ಡಿಕ್ಕಿ ಹೊಡೆದು ರತ್ನಾ ಮಹೇಂದ್ರಕರ್ ಎಂಬ 14 ವರ್ಷದ ಬಾಲಕಿ ಮೇಲೆ ಹರಿದಿದೆ. ಅಪಘಾತದಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಮೃತಪಟ್ಟ ಬಾಲಕಿ ಹಾಗೂ ಗಾಯಾಳು ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮಸ್ಥರು ಎನ್ನಲಾಗಿದೆ.
ಬೈಕ್ ಸವಾರ ಫಕೀರಯ್ಯ ಹಿರೇಮಠ ಹಾಗೂ 2 ವರ್ಷದ ಮಗು ಸಚಿನ್ ಸ್ಥಿತಿ ಚಿಂತಾಜನಕವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಟಿಪ್ಪರ್ ಚಾಲಕನ ಅತಿಯಾದ ವೇಗವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಅಪಘಾತ ಸಂಭವಿಸಿದ ಬಳಿಕ ಟಿಪ್ಪರ್ ಬಾಲಕಿಯನ್ನು ಹತ್ತಾರು ಮೀಟರ್ವರೆಗೆ ಎಳೆದೊಯ್ದಿದೆ. ಟಿಪ್ಪರ್ ಲಾರಿಯ ಗಾಲಿಯ ಕೆಳಗೆ ಸಿಲುಕಿದ್ದ ಬಾಲಕಿಯನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನು ಘಟನೆ ನಡೆದ ಕೂಡಲೇ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿ ಟಿಪ್ಪರ್ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.