ಗದಗ: 2001ರ ಡಿಸೆಂಬರ್ 13 ರಂದು ದೇಶ ಬೆಚ್ಚಿಬೀಳುವ ಘಟನೆಯೊಂದು ನಡೆದಿತ್ತು. ಇಂದಿಗೆ ಆ ದಾಳಿ ನಡೆದು 13 ವರ್ಷ. ನಮ್ಮ ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾಗ ಗುಂಡಿನ ಅಟ್ಟಹಾಸಕ್ಕೆ ಹೆದರದೆ, ಭಯೋತ್ಪಾದಕರ ಗುಂಡಿಗೆ ಎದೆಕೊಟ್ಟು ಹೋರಾಡಿದ ವೀರನೊಬ್ಬ ಗದಗ ಜಿಲ್ಲೆಯಲ್ಲಿದ್ದಾರೆ.
ಗದಗ ತಾಲೂಕಿನ ಹೊಂಬಳ ಗ್ರಾಮದ ಶಿವಪುತ್ರಪ್ಪ ವೀರಯೋಧ. ಇವರು ಅಂದು ಉಗ್ರರೊಂದಿಗೆ ಹೋರಾಡಿ, 8ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದು, ಇಬ್ಬರನ್ನು ಜೀವಂತವಾಗಿ ವಶಕ್ಕೆ ಪಡೆದಿದ್ದರು. ಜತೆಗೆ ಶಿವಪುತ್ರಪ್ಪ ಮೈಯೊಳಗೆ 5 ಗುಂಡು ಹೊಕ್ಕಿದ್ದವು. 94 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ, ಬದುಕಿ ಬಂದ ಅಪ್ರತಿಮ ದೇಶ ಪ್ರೇಮಿ. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಸಹ ಅವರು ಎಲೆಮರೆಯ ಕಾಯಿಯಂತೆ ತಾವು ಮಾಡಿದ ಸಾಧನೆ ದೊಡ್ಡದಲ್ಲ ಎನ್ನುತ್ತಿದ್ದಾರೆ.
ಸಿಆರ್ಪಿಎಫ್ನಲ್ಲಿ ಯೋಧರಾಗಿ ಏಪ್ರಿಲ್ 17, 1984ರಲ್ಲಿ ತಮ್ಮ ಸೇವೆ ಪ್ರಾರಂಭಿಸಿದ್ದರು. ಕೇರಳ, ಪಂಜಾಬ್, ಜಮ್ಮು-ಕಾಶ್ಮೀರ, ದೆಹಲಿ, ನಾರ್ಥ್ ಈಸ್ಟ್ ಹಾಗೂ ಗುಜರಾತ್ ಸೇರಿ ಮುಂತಾದ ಸ್ಥಳಗಳಲ್ಲಿ 25 ವರ್ಷ 5 ತಿಂಗಳು 18 ದಿನಗಳ ಕಾಲ ದೇಶ ಸೇವೆ ಸಲ್ಲಿಸಿದ್ದಾರೆ.
2001ರ ಡಿಸೆಂಬರ್ 13ರಂದು ಉಗ್ರರು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಶಿವಪುತ್ರಪ್ಪನವರು ದೆಹಲಿಯ ಪಾರ್ಲಿಮೆಂಟ್ ಬಳಿಯೇ ಕಾರ್ಯ ನಿರ್ವಹಿಸುತ್ತಿದ್ದರು. ಉಗ್ರರ ದಾಳಿಯ ಸಂದರ್ಭದಲ್ಲಿ ನಡೆದ ಘೋರ ಗುಂಡಿನ ದಾಳಿಯಲ್ಲಿ ಶಿವಪುತ್ರಪ್ಪ ಸತತ 12 ಗಂಟೆಗಳ ಕಾಲ ಉಗ್ರರೊಂದಿಗೆ ಗುಂಡಿನ ಕಾಳಗ ನಡೆಸಿದ್ದರು. ಈ ಸಂದರ್ಭದಲ್ಲಿ 10 ಸೈನಿಕರು ಹುತಾತ್ಮರಾದರು. 8 ಜನ ಉಗ್ರರನ್ನು ನಮ್ಮ ಸೈನಿಕ ಮಟ್ಟ ಹಾಕಿದ್ದರು.
ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟಿದ್ದರು. ಈ ವೇಳೆ ಸಾರ್ವಜನಿಕರು ಸೇರಿ ಒಟ್ಟು 17 ಜನರಿಗೆ ಗುಂಡುಗಳು ತಾಕಿತ್ತು ಎಂದು ತಮ್ಮ ಹೋರಾಟ ದಿನಗಳನ್ನು ಈಟಿವಿ ಭಾರತದೊಂದಿಗೆ ಮೆಲುಕು ಹಾಕಿದರು. ಇವರ ಅಪ್ರತಿಮ ಸಾಧನೆ ಧರ್ಮಪತ್ನಿ ಹಾಗೂ ಸ್ಥಳೀಯರು ಹೆಮ್ಮೆ ಪಡುತ್ತಿದ್ದಾರೆ. ನಿವೃತ್ತಿಯ ಈ ದಿನಗಳಲ್ಲೂ ಸಹ ಶಾಲಾ ಮಕ್ಕಳಿಗೆ ದೇಶಪ್ರೇಮದ ಪಾಠ ಮಾಡೋದು, ರಕ್ತದಾನ ಮಾಡೋದು ಶಿವಪುತ್ರಪ್ಪ ಅವರ ಕಾಯಕ.