ಗದಗ: ಮಲ್ಟಿಪಲ್ ಹೆರಿಗೆ ಆಸ್ಪತ್ರೆಯಲ್ಲಿ ಪ್ರತಿದಿನ ಗರ್ಭಿಣಿ, ಬಾಣಂತಿಯರು ಕುಡಿಯಲು ಮತ್ತು ಸ್ನಾನಕ್ಕೆ ನೀರಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಶೌಚಲಯಕ್ಕೆ ಬೀಗ ಜಡಿಯಲಾಗಿದೆ. ವಿಚಿತ್ರವೆಂದರೆ ಡಿಸಿಯವರ ಪತ್ನಿಗೆ ಪ್ರತ್ಯೇಕ ಎಸಿ ಕೊಠಡಿಯಲ್ಲಿ ಚಿಕಿತ್ಸೆ ಕೊಡೋ ಇಲ್ಲಿನ ವೈದ್ಯರು, ಜನಸಾಮಾನ್ಯರು ನೀರಿಗಾಗಿ ಬಾಟಲಿ ಹಿಡಿದು ಬೀದಿ ಬೀದಿ ಅಲೆಯುವಂತ ಸ್ಥಿತಿಗೆ ತಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ನಗರದ ಕೆ ಸಿ ರಾಣಿ ರಸ್ತೆಯಲ್ಲಿರುವ ದಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕುಡಿಯುವ ನೀರು ಬಂದಿಲ್ಲ. ಗರ್ಭಿಣಿ, ಬಾಣಂತಿಯರು ಮತ್ತು ಅವರ ಸಂಬಂಧಿಕರು ಬಾಟಲಿ ಹಿಡಿದು ಬೀದಿ ಬೀದಿ ಅಲೆಯುವ ದೃಶ್ಯ ಸಾಮಾನ್ಯವಾಗಿದೆ. ಜೊತೆಗೆ ಕುಡಿಯುವ ನೀರು ಅಷ್ಟೇ ಅಲ್ಲಾ, ಅವರಿಗೆ ಬಿಸಿ ನೀರನ್ನೂ ಸಹ ಕೊಟ್ಟಿಲ್ಲವೆಂದು ಹೇಳಲಾಗ್ತಿದೆ.
ಬಾಣಂತಿಯರು ಬಿಸಿ ನೀರಿಗಾಗಿ ಬೀದಿ ಬದಿಯ ಹೋಟೆಲ್ ಗಳಿಗೆ ಅಲೆಯುವಂತಾಗಿದೆ. ಅದು ಒಂದು ಬಾಟಲ್ ಬಿಸಿ ನೀರಿಗೆ 20 ರೂ. ಕೊಟ್ಟು ತರಬೇಕು. ಆದರೆ ನೀರು ಕೊಡಿ ಅಂತ ಅಲ್ಲಿನ ಸಿಬ್ಬಂದಿಯನ್ನು ಕೇಳಿದರೆ ಹೊರಗಡೆ ಹೋಗಿ ತನ್ನಿ ಅಂತ ಅವಾಜ್ ಹಾಕ್ತಾರೆ ಎಂದು ಆರೋಪಿಸಲಾಗಿದೆ.
ಈ ವಿಚಾರವಾಗಿ ಕೆಲವರು ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕೆ ಬಂದ ಜಿಮ್ಸ್ ಹಿರಿಯ ವೈದ್ಯ ಡಾ. ಪಲ್ಲೇದ್ ಅವರು ಪ್ರತಿಭಟನಾಕಾರರ ಮನವೊಲಿಸಿದರು. ಇನ್ನೆರಡು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಸಮಸ್ಯೆ ಬಗೆ ಹರಿಯದಿದ್ದರೆ, ಉಗ್ರ ಪ್ರತಿಭಟನೆ ಮಾಡುವುದಾಗಿ ಪ್ರತಿಭಟನಾಕಾರರು ವೈದ್ಯರಿಗೆ ಎಚ್ಚರಿಕೆ ನೀಡಿದರು.