ಗದಗ: ರೈತ ಒಕ್ಕಿದರೆ ಉಕ್ಕುವುದು ಜಗವೆಲ್ಲ, ರೈತ ಸಂಕಷ್ಟಕ್ಕೆ ಸಿಲುಕಿದರೆ ಬಿಕ್ಕುವುದು ಜಗವೆಲ್ಲ ಎನ್ನುವಂತೆ ಗದಗ ಜಿಲ್ಲೆಯ ರೈತರು ಉತ್ತಿ, ಬಿತ್ತಿ, ಬೆಳೆದು ಮಲಪ್ರಭಾ ಪ್ರವಾಹಕ್ಕೆ ಸಿಲುಕಿ ಈ ವರ್ಷವೂ ಅನ್ನದಾತ ಕಂಗಾಲಾಗಿದ್ದಾನೆ.
ಕಳೆದ ವರ್ಷದ ಪ್ರವಾಹದ ಪರಿಹಾರವೂ ಸರಿಯಾಗಿ ರೈತರಿಗೆ ದೊರೆತಿಲ್ಲ. ಆದರೂ ಮತ್ತೆ ಜೀವನ ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೆ ಪ್ರವಾಹ ಬಂದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
![crop Destroy by flood](https://etvbharatimages.akamaized.net/etvbharat/prod-images/8572302_142_8572302_1598492678512.png)
ಅದ್ಯಾಕೋ ರೈತರಿಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಈ ಬಾರಿಯೂ ನೆರೆ ಹಾವಳಿಗೆ ಸಿಕ್ಕು ಅನ್ನದಾತನ ಬದುಕು ಮತ್ತೆ ಬೀದಿಗೆ ಬಂದಿದೆ. ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ 16 ಗ್ರಾಮಗಳು ಮಲಪ್ರಭಾ ನದಿ ಪ್ರವಾಹಕ್ಕೆ ಒಳಗಾಗಿವೆ. ಈ ಪ್ರವಾಹದಿಂದ ಸಾವಿರಾರು ಹೆಕ್ಟೇರ್ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳೆಲ್ಲ ಸಂಪೂರ್ಣ ಜಲಾವೃತವಾಗಿವೆ.
ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ಹೆಸರು, ಪೇರಲ, ತೆಂಗು, ಮಾವು, ಕಬ್ಬು ಹೀಗೆ ಅನೇಕ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿವೆ. ಕೆಲವು ಬೆಳೆಗಳು ಇನ್ನೇನು ಕಟಾವಿಗೆ ಬಂದ ಸಂದರ್ಭದಲ್ಲಿ ಪ್ರವಾಹ ಎಲ್ಲವನ್ನೂ ನುಂಗಿ ನೀರು ಕುಡಿದಿದ್ದು, ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಾಲ ಮಾಡಿ ಹತ್ತಾರು ಸಾವಿರ ರೂ.ಖರ್ಚು ಮಾಡಿ ಬೆಳೆ ಬೆಳೆಯಲಾಗುತ್ತೆ. ಈ ಸಮಯದಲ್ಲಿ ಹೀಗಾದ್ರೆ ಏನು ಮಾಡೋದು ಸರ್. ಸರ್ಕಾರ, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಸೂಕ್ತ ಪರಿಹಾರ ನೀಡಿದರೆ ರೈತ ಬದುಕ್ತಾನೆ. ಪದೇ ಪದೆ ಹೀಗೆ ಆದ್ರೆ ಸಾಲದ ಸುಳಿಗೆ ಸಿಲುಕಿ ಸಾವೊಂದು ದಾರಿ ಎಂದು ನೊಂದ ರೈತ ಕಣ್ಣೀರಿಡುತ್ತಿದ್ದಾನೆ.
ಮಲಪ್ರಭಾ ಪ್ರವಾಹದಿಂದ ಸಾಕಷ್ಟು ಹಾನಿಯಾದರೂ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇತ್ತ ಕಣ್ಣು ಹಾಯಿಸಿಲ್ಲ ಎನ್ನುವುದು ರೈತರ ಆರೋಪ. ಪದೇ ಪದೆ ಪ್ರವಾಹಕ್ಕೊಳಗಾದ ನದಿ ಪಾತ್ರದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅನೇಕ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿರುವುದನ್ನು ನೋಡಿ ಕಣ್ಣೀರಿಡುವಂತಾಗಿದೆ. ಮಲಪ್ರಭಾ ಈ ನದಿ ಈ ಜನರ ಪಾಲಿಗೆ ಕಣ್ಣೀರಿನ ಹೊಳೆಯೇ ಆಗಿದೆ.
ಮೊದಲು ಮೂರು ವರ್ಷ ಬರಗಾಲಕ್ಕೆ ತುತ್ತಾಗಿ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದ. ಆದ್ರೆ ಕಳೆದ ಎರಡು ವರ್ಷದಿಂದ ಪ್ರವಾಹಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಪ್ರವಾಹದ ಪರಿಹಾರ ಸಹ ಸರಿಯಾಗಿ ಸಿಕ್ಕಿಲ್ಲ. ಈಗ ಮತ್ತೆ ಪ್ರವಾಹ ಬಂದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಾರಿ ಸೂಕ್ತ ಪರಿಹಾರ ನೀಡದಿದ್ರೆ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎನ್ನುತ್ತಿದ್ದಾರೆ ಪರಿಹಾರ ಸಿಗದ ರೈತರು.