ಗದಗ: ವೀರ ಮರಣಹೊಂದಿದ ಯೋಧನ ಪಾರ್ಥೀವ ಶರೀರ ಇಂದು ಸ್ವಗ್ರಾಮಕ್ಕೆ ಬರಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಗ್ರಾಮದ ವೀರೇಶ ಕುರಹಟ್ಟಿ (47) ಡಿಸೆಂಬರ್ 25ರಂದು ನಡೆದ ಉಗ್ರರ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ವೀರೇಶ ಕುರಹಟ್ಟಿ ಕಳೆದ 30 ವರ್ಷಗಳಿಂದ ಭಾರತೀಯ ಸೇನೆಯ 18 ನೇ ಮರಾಠಾ ಲೈಟ್ ಇನ್ ಫೆಂಟ್ರಿ ರೆಜಿಮೆಂಟನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಎರಡು ತಿಂಗಳ ಹಿಂದಷ್ಟೇ ಸ್ವಗ್ರಾಮಕ್ಕೆ ಬಂದು ಕುಟುಂಬಸ್ಥರೊಂದಿಗೆ ದೀಪಾವಳಿ ಹಬ್ಬ ಅಚರಿಸಿ ಹೋಗಿದ್ದರು.
ಕರಮುಡಿ ಗ್ರಾಮದ ಭೋಜಪ್ಪ ಮತ್ತು ಕಾಶಮ್ಮ ದಂಪತಿಗಳ ಸುಪುತ್ರನಾಗಿರೋ ವೀರೇಶ 1990ರಲ್ಲಿ ಸೇನೆಗೆ ಸೇರಿದ್ರು. ಒಪ್ಪಂದದ ಪ್ರಕಾರ 30 ವರ್ಷಗಳ ಕಾಲ ಸೇವೆ ಸಲ್ಲಿಸುವುದಾಗಿ ಬರೆದು ಕೊಟ್ಟಿದ್ರು. ಬರುವ 2020ರ ಮಾರ್ಚ್ 28ಕ್ಕೆ ಮೂವತ್ತು ವರ್ಷ ಪೂರ್ಣಗೊಳ್ಳುತ್ತಿತ್ತು. ಆದರೆ ವಿಧಿಯಾಟ ವೀರೇಶರನ್ನು ವೀರಮರಣದೊಂದಿಗೆ ಸ್ವಗ್ರಾಮಕ್ಕೆ ಕರೆಸಿಕೊಳ್ತಿದೆ.
ಜಮ್ಮು ಕಾಶ್ಮೀರ ಗಡಿ ಭಾಗದಲ್ಲಿ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಎದೆಗುಂದದೆ ಎದೆಗೆ ಎದೆ ಕೊಟ್ಟು ಹೋರಾಡಿ ಕೊನೆಯುಸಿರು ಎಳೆದಿದ್ದಾರೆ. ಪರಿಣಾಮ ಸೈನಿಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವೀರೇಶ ಅವರ ಪಾರ್ಥೀವ ಶರೀರ ಇಂದು ಸ್ವಗ್ರಾಮಕ್ಕೆ ಬರುವ ನೀರಿಕ್ಷೆಯಲ್ಲಿದೆ. ಜಿಲ್ಲಾಡಳಿತ ವೀರ ಯೋಧನ ಆಗಮನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.