ಗದಗ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ನವರಿಗೆ ನಮ್ಮನ್ನು ಹೋಗಳೋಕೆ ಆಗುತ್ತಾ? ಆಗೋದಿಲ್ಲ. ಮೊದಲು ಅವರು ಕಾಯ್ದೆ ಬಗ್ಗೆ ತಿಳಿದುಕೊಳ್ಳಲಿ, ಅದನ್ನ ಬಿಟ್ಟು ಸಿಎಎ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ರು.
ನಗರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿd ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಇಲ್ಲಿನ ಪೌರತ್ವ ಕೊಡುತ್ತೇವೆಂದು ಹೇಳಿದ್ದೇವೆ. ನಮ್ಮ ದೇಶದಲ್ಲಿನ ಅಲ್ಪಸಂಖ್ಯಾತರನ್ನು ಹೊರಹಾಕುತ್ತೇವೆಂದು ಹೇಳಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ನವರು ನಮ್ಮನ್ನ ಹೊಗಳಬೇಕು ಎಂಬ ನಿರೀಕ್ಷೆಯಲ್ಲಿ ನಾವಿಲ್ಲ ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಕಳಸಾ ಬಂಡೂರಿ ಸಭೆಗೆ ಗೈರಾದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಾನು ಪೌರತ್ವ ಕಾಯ್ದೆ ಜಾಗೃತಿ ಕಾರ್ಯಕ್ರಮಕ್ಕಾಗಿ ಕೊಪ್ಪಳಕ್ಕೆ ಹೋಗಿದ್ದೆ. ಕಳಸಾ ಬಂಡೂರಿ ಸಭೆ ಬಗ್ಗೆ ನನಗೆ ಮಾಹಿತಿಯೂ ಇಲ್ಲ, ಯಾವ ಪತ್ರವೂ ಬಂದಿಲ್ಲ. ಮಹದಾಯಿಗಾಗಿ ಯಾರೇ ಹೋರಾಟ ಮಾಡಿದರೂ ಅದನ್ನ ನಾನು ಸ್ವಾಗತಿಸುತ್ತೇನೆ. ರೈತನಾಗಿ, ಜಂತರಮಂತರ್ನಲ್ಲಿ ಮೊದಲ ಬಾರಿಗೆ ನಾನು ಹಾಗೂ ಬಸವರಾಜ ಬೊಮ್ಮಾಯಿ ಹೋರಾಟ ಮಾಡಿದ್ದವು. ಯೋಜನೆಗೆ ಯಡಿಯೂರಪ್ಪನವರ ಸರ್ಕಾರ ಬಂದಾಗ 150 ಕೋಟಿ ಬಿಡುಗಡೆ ಮಾಡಿತ್ತು. ಮಹದಾಯಿಗಾಗಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಹೋಗಿ ಬಂದಿದ್ದಾರೆ ಎಂದು ತಿಳಿಸಿದರು.