ಗದಗ: ಅದು ಉತ್ತರ ಕರ್ನಾಟಕದ ಸಹ್ಯಾದ್ರಿ. ಅಪಾರ ಆಯುರ್ವೇದ ಔಷಧ ಸಸ್ಯಗಳ ತಾಣ. ಎಪ್ಪತ್ತುಗಿರಿಗಿಂತ ಕಪ್ಪತ್ತಗಿರಿ ನೋಡು ಅನ್ನುವ ಪ್ರಖ್ಯಾತಿ ಹೊಂದಿರುವ ಆ ಹಸಿರು ಕಾಶಿಗೆ ಇದೀಗ ಅಗ್ನಿಯ ಕಂಠಕ ಎದುರಾಗಿದೆ. ಕಪ್ಪತಗುಡ್ಡದಲ್ಲಿ ಪ್ರತಿ ಬಾರಿ ಬೇಸಿಗೆ ಸಮಯದಲ್ಲಿ ಎದುರಾಗತ್ತಿದ್ದ ಬೆಂಕಿ ಸಮಸ್ಯೆ ಇದೀಗ ಬೇಸಿಗೆ ಆರಂಭಕ್ಕೂ ಮೊದಲೇ ಶುರುವಾಗಿದೆ.
ಹೌದು, ಉತ್ತರ ಕರ್ನಾಟದ ಸಸ್ಯಕಾಶಿ, ಹಸಿರು ಸಹ್ಯಾದ್ರಿ, ಅಪಾರ ಆಯುರ್ವೇದ ಔಷಧಗಳ ಸಸ್ಯತಾಣ ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಉತ್ತರ ಕರ್ನಾಟಕದಲ್ಲಿ ದಕ್ಷಿಣ ಕರ್ನಾಟಕದ ಹಸಿರು ಸಿರಿಯಷ್ಟೇ ಖ್ಯಾತಿ ಹೊಂದಿದೆ. ಗದಗ ಜಿಲ್ಲೆ ಬಿಂಕದಕಟ್ಟಿಯಿಂದ ಪ್ರಾರಂಭವಾಗೋ ಸಾಲುಗಿರಿಗಳ ಧಾಮ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದವರೆಗೂ ಹಬ್ಬಿದೆ. ಹಿಂದೆ ಇದೇ ವನ್ಯಸಿರಿ ಕಪ್ಪತ್ತಗುಡ್ಡ ವನ್ಯಜೀವಿಧಾಮ ಆಗಬೇಕು ಅಂತ ನಾಡಿನ ಮಠಾಧೀಶರು ಹಾಗೂ ಪರಿಸರ ಹೋರಾಟಗಾರರು ಸಾಕಷ್ಟು ಹೋರಾಟ ಮಾಡಿದ ಫಲವಾಗಿ ಸರ್ಕಾರ ಕಪ್ಪತ್ತಗುಡ್ಡವನ್ನ ಸಂರಕ್ಷಿತ ಅರಣ್ಯ ಪ್ರದೇಶ ಅಂತನೂ ಘೋಷಣೆ ಮಾಡಿದೆ. ಆದರೆ, ಈವರೆಗೂ ಕಪ್ಪತ್ತಗುಡ್ಡಕ್ಕೆ ಬೆಂಕಿಯ ಕಾಟ ತಪ್ಪಿಲ್ಲ.
ಮುಂಡರಗಿ ತಾಲೂಕಿನ ಡೋಣಿ ತಾಂಡೆ ಬಳಿ ಕಾಣಿಸಿಕೊಂಡ ಬೆಂಕಿ ಇಡೀ ರಾತ್ರಿಯೆಲ್ಲಾ ಹೊತ್ತಿ ಉರಿದು ಇಂದು ಬೆಳಗಿನ ಜಾವದವರೆಗೂ ಉರಿದಿದೆ. ಇದು ಯಾರೋ ಅಲ್ಲಿನ ಸ್ಥಳೀಯ ಕಿಡಿಗೇಡಿಗಳೇ ಮಾಡಿದ ಕೃತ್ಯವಾಗಿದೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಒತ್ತುವರಿ ಮಾಡಿಕೊಂಡಿದ್ದವರನ್ನ ಬಿಡಿಸಿ ಹಿಂದೆ ಸರಿಸಿದ್ದಕ್ಕೆ ದ್ವೇಷದ ಭಾವನೆಯಿಂದ ಈ ರೀತಿ ಮಾಡ್ತಿದ್ದಾರೆ ಅಂತ ಹೇಳಲಾಗಿದೆ. ಜೊತೆಗೆ ಬೆಂಕಿ ನಂದಿಸಲು ನಮ್ಮಲ್ಲಿ ಸಿಬ್ಬಂದಿಗಳೂ ಸಹ ಕಡಿಮೆ ಇದ್ದು ಇಂತಹ ಕೃತ್ಯ ಎಸಗುವವರ ಮಾಹಿತಿ ನೀಡಿದರೆ ಅವರಿಗೆ ಸೂಕ್ತ ನಗದು ಬಹುಮಾನ ನೀಡುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ಹೇಳ್ತಿದ್ದಾರೆ.
ಇನ್ನು ಕಪ್ಪತ್ತಗುಡ್ಡಕ್ಕೆ ಬೆಂಕಿಯ ಕಾಟ ಹೊಸದೇನಲ್ಲ. ಬೆಂಕಿ ಬೀಳಬಾರದು ಅಂತಾನೇ ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗೃತ ಕ್ರಮವಾಗಿ ಫೈರ್ ಲೈನ್ ಕಾಮಗಾರಿ ಮಾಡಿಕೊಳ್ಳುತ್ತಿತ್ತು. ಆದರೆ, ಕೊರೊನಾ ಹಿನ್ನೆಲೆ ಇಲಾಖೆಯಲ್ಲಿನ ಸಿಬ್ಬಂದಿ ಕಡಿತಗೊಳಿಸಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಫೈರ್ ಲೈನ್ ಮಾಡಲಾಗಿಲ್ಲ. ಹೀಗಾಗಿ ಈ ಬಾರಿ ಬೆಂಕಿಯ ಕೆನ್ನಾಲೆಗೆಯನ್ನು ತಪ್ಪಿಸೋದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ.
ಕಪ್ಪತ್ತಗುಡ್ಡ ಉಳಿಸಬೇಕೆಂದರೆ ಸ್ಥಳಿಯರೂ ಸಹ ಇಲ್ಲಿ ಕೈ ಜೋಡಿಸಬೇಕು. ಅಂದಾಗ ಮಾತ್ರ ಕಪ್ಪತ್ತಗುಡ್ಡ ಬೆಂಕಿಯಿಂದ ನಂದಿಸಲು ಸಾಧ್ಯ. ಅಲ್ಲದೇ ಅರಣ್ಯ ಇಲಾಖೆ ಸಹ ಈ ಬಗ್ಗೆ ಜಾಗೃತಿ ಮೂಡಿಸಿ ಕಪ್ಪತ್ತಗುಡ್ಡ ಉಳಿಸಲು ಅರಣ್ಯ ಇಲಾಖೆ ಮುದಾಗಬೇಕಿದೆ ಅನ್ನೋದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.
ಒಟ್ಟಾರೆ ಕಪ್ಪತ್ತಗುಡ್ಡಕ್ಕೆ ನಿರಂತರವಾಗಿ ಕಂಠಕ ಬೆನ್ನುಹತ್ತಿದೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಬೆಂಕಿಯ ಕೆನ್ನಾಲೆಗೆ ಸಿಕ್ಕು ನಲುಗೋ ಹಸಿರುಧಾಮಕ್ಕೆ ರಕ್ಷಾಕವಚ ಇಲ್ಲದಂತಾಗಿದೆ. ಅದರೆ ಬೇಲಿಯೇ ಎದ್ದು ಹೊಲ ಮೇಯಿತು ಎನ್ನುವಂತೆ ಕಪ್ಪತ್ತಗುಡ್ಡದ ಅಕ್ಕಪಕ್ಕದ ಸ್ಥಳಿಯರೇ ಈ ಕೃತ್ಯ ಎಸಗುತ್ತಿದ್ದಾರೆ ಅನ್ನೋ ಆತಂಕಕಾರಿ ಬೆಳವಣಿಗೆ ಕಪ್ಪತ್ತಗುಡ್ಡಕ್ಕೆ ಕೊಡಲಿ ಏಟು ಕೊಟ್ಟಂತಾಗಿದೆ. ಇತ್ತ ಅರಣ್ಯ ಇಲಾಖೆ ಸಹ ಸಿಬ್ಬಂದಿ ಕೊರತೆ ಅಂತ ಬೊಟ್ಟು ತೋರಿಸುತ್ತದೆ. ಹೀಗಾಗಿ ಉತ್ತರ ಕರ್ನಾಟಕದ ಹಸಿರುಧಾಮವಾದ ಈ ಕಪ್ಪತ್ತಗುಡ್ಡವನ್ನ ರಕ್ಷಣೆ ಮಾಡೋದಾದರೂ ಯಾರು ಅನ್ನೋದು ಸದ್ಯಕ್ಕಿರುವ ಪ್ರಶ್ನೆ.