ಗದಗ: ಕಿರುಕುಳಕ್ಕೆ ಬೇಸತ್ತು ಪೊಲೀಸ್ ಕಾನ್ಸ್ಟೇಬಲ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರು, ಐವರು ಪೊಲೀಸರು ಸೇರಿದಂತೆ 9 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.
ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿದ್ದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಅರ್ಜುನ್ ಪಾಟೀಲ್ ಗುರುವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಆರೇಳು ಪುಟಗಳ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ದುಷ್ಕರ್ಮಿಗಳ ಕಿರುಕುಳ ಹೆಚ್ಚಾಗಿದ್ದು, ಮಾನಸಿಕ ಹಿಂಸೆ ತಾಳದೇ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಎಂದಿನಂತೆ ಡ್ಯೂಟಿಗೆ ಹೋಗಬೇಕು ಎಂದು ಊಟದ ಬಾಕ್ಸ್ ಕಟ್ಟಿಕೊಂಡಿದ್ದ. ಪತ್ನಿ ಹಾಗೂ ತಂದೆ ತಾಯಿ ಸೇರಿದಂತೆ ಕುಟುಂಬಸ್ಥರು ಧಾರವಾಡಕ್ಕೆ ಹೋಗಿದ್ದರು. ಈ ವೇಳೆ, ಮನೆಯಲ್ಲಿ ಯಾರೂ ಇರಲಿಲ್ಲ. ಅರ್ಜುನ್ ಪಾಟೀಲ್ಗೆ ಯಾವುದೋ ಸಂದೇಶ ಬಂದಿದ್ದು, ಬಳಿಕ ಮನೆಯಲ್ಲೇ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಅರ್ಜುನ್ ಪಾಟೀಲ್ಗೆ ಪತ್ನಿ, ಇಬ್ಬರು ಮಕ್ಕಳು, ತಂದೆ-ತಾಯಿ ಇದ್ದರು. ಲಕ್ಕುಂಡಿ ಗ್ರಾಮದಲ್ಲಿ ಪಾರ್ಥಿವ ಶರೀರಕ್ಕೆ ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಲಾಯಿತು. ಡಿವೈಎಸ್ಪಿ ಶಿವಾನಂದ, ಸಿಪಿಐ ಸೇರಿದಂತೆ ಹಲವರು ಈ ವೇಳೆ ಭಾಗಿಯಾಗಿದ್ದರು. ಮಗನ ಕಳೆದುಕೊಂಡ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಆತ್ಮಹತ್ಯೆ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಕಿರುಕುಳ ನೀಡಿದ್ದ ಆರೋಪದ ಮೇಲೆ ಇಬ್ಬರು ಪತ್ರಕರ್ತರು, ಐವರು ಪೊಲೀಸರು ಸೇರಿ 9 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಲಬುರಗಿ : ಹೋಳಿ ಹಬ್ಬಕ್ಕೆ ಊರಿಗೆ ಬಂದವನನ್ನು ಕೊಂದು ಸುಟ್ಟು ಹಾಕಿದ ಕಿರಾತಕರು