ಗದಗ : ಆಯುಷ್ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆಯುರ್ವೇದದ ಹೆಸರಲ್ಲಿ ಮಾರಕ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನನ್ನು ಬಂಧಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಹಾಲಿಂಗಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಲೋಕೇಶ್ ಟೇಕಲ್ ಬಂಧಿತನಾಗಿರೋ ನಕಲಿ ವೈದ್ಯನಾಗಿದ್ದಾನೆ. ಈತ ಬೇರೆಯವರ ಹೆಸರಿನಲ್ಲಿನ ಸರ್ಟಿಫಿಕೇಟನ್ನು ಬಳಸಿಕೊಂಡು ಕ್ಯಾನ್ಸರ್, ಹೆಚ್ಐವಿ ಸೇರಿದಂತೆ ಹಲವು ಮಾರಕ ರೋಗಗಳಿಗೆ ಚಿಕಿತ್ಸೆ ನೀಡ್ತೇನೆ ಎಂದು ಹೇಳ್ತಿದ್ದ. ಜನ್ರೂ ಸಹ ಈತನ ಬಳಿ ಹೋಗಿ ಮೋಸ ಹೋಗ್ತಿದ್ರು ಅಂತ ಆಯುಷ್ ವೈದ್ಯಾಧಿಕಾರಿ ಡಾ. ಸುಜಾತ ಪಾಟೀಲ್ ತಿಳಿಸಿದ್ದಾರೆ.
ಅಗಸ್ತ್ಯ ಆಯುರ್ವೇದಿಕ್ ಸಂಶೋಧನೆ ಮತ್ತು ಚಿಕಿತ್ಸಾ ಕೇಂದ್ರ ಎನ್ನೋ ಹೆಸರಿನ ಕೇಂದ್ರದಲ್ಲಿ ಈತ ಚಿಕಿತ್ಸೆ ನೀಡುತ್ತಿದ್ದ. ತಾನೊಬ್ಬ ಪಾರಂಪರಿಕ ವೈದ್ಯನಾಗಿದ್ದು, ತನಗೆ ಯಾವುದೇ ಡಿಗ್ರಿ ಬೇಡ ಎಂದು ಹೇಳಿದ್ದಾನೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಿನಗಳಿಂದ ಮಹಾಲಿಂಗಪುರದ ಅರಣ್ಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರ ಸ್ಥಾಪಿಸಿದ್ದ ಲೋಕೇಶ್ ಬಳಿ ದಿನವೊಂದಕ್ಕೆ ನೂರಾರು ಜನರು ಬಂದು ಚಿಕಿತ್ಸೆ ಪಡೀತಿದ್ರು. ತನ್ನ ತಪ್ಪು ಹೊರ ಬರಬಾರದೆಂದು ಬಿಎಎಂಎಸ್ ಆಗಿದ್ದ 3 ಜನ ವೈದ್ಯರನ್ನೂ ಸಹ ತನ್ನ ಬಳಿ ಕೆಲಸಕ್ಕೆ ಇಟ್ಟುಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ವೇಳೆ ಯಾವುದೇ ಮಾಹಿತಿ ಇಲ್ಲದ ಔಷಧಗಳೂ ಸಹ ಪತ್ತೆಯಾಗಿವೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿಲಾಗಿದೆ.