ಗದಗ: ಕೊಳವೆ ಬಾವಿಗೆ ಪರವಾನಿಗೆ ನೀಡುವಂತೆ ಆಗ್ರಹಿಸಿ ಮಾಜಿ ಸೈನಿಕನೊಬ್ಬ ಧರಣಿ ನಡೆಸಿರುವ ಘಟನೆ ಗದಗದ ರೋಣ ತಾಲೂಕಿನಲ್ಲಿ ನಡೆದಿದೆ.
ರೋಣ ತಾಲೂಕಿನ ನರೇಗಲ್ ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ಹೆಸ್ಕಾಂ ಕಚೇರಿ ಬಳಿ ಈ ಘಟನೆ ನಡೆದಿದ್ದು, ಮಾಜಿ ಸೈನಿಕ ಫಕೀರಪ್ಪ ಶಂಭುಲಿಂಗಪ್ಪ ಆಲೂರ ಧರಣಿ ನಡೆಸುತ್ತಿದ್ದಾರೆ. ಸೈನ್ಯದಲ್ಲಿ ಸೇವಾವಧಿ ಪೂರ್ಣಗೊಂಡ ನಂತರ ನರೇಗಲ್ ಸರಹದ್ದಿನ ರೋಣ ರಸ್ತೆಗೆ ಹೊಂದಿಕೊಂಡಂತೆ 5 ಎಕರೆ ಜಮೀನನಲ್ಲಿ ಕೃಷಿ ಮಾಡಿ ಜೀವನ ನಡೆಸುತ್ತಿದ್ದಾರೆ.
2017ರಲ್ಲಿ ಹೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್‌ರಿಂದ ಪರವಾನಿಗೆ ಪಡೆದು ಅಕ್ರಮ ಸಕ್ರಮ ಯೋಜನೆಯಡಿ ಕೊಳವೆ ಬಾವಿಯನ್ನು ಕೊರೆಸಿದ್ದರು. ಸತತ ಬರಗಾಲದಿಂದಾಗಿ ಕೊಳವೆ ಬಾವಿ ಬತ್ತಿ ಹೋಗಿದೆ. ಈ ಕಾರಣದಿಂದಾಗಿ ಮತ್ತೊಂದು ಕೊಳವೆಯನ್ನು ಕೊರೆಯಿಸಿದ್ದೆ. ಸದರಿ ಬಾವಿಯಲ್ಲಿ 2.5 ಅಡಿ ನೀರು ಬಿದ್ದಿದೆ.
ಇನ್ನು ಮೊದಲಿನ ಕೊಳವೆ ಬಾವಿಗೆ ಬಳಕೆ ಮಾಡಿಕೊಂಡಿದ್ದ ವಿದ್ಯುತ್ ಸಂಪರ್ಕವನ್ನೇ ಈ ಕೊಳಬೆ ಬಾವಿ ಮೋಟಾರ್ಗೂ ಬಳಕೆ ಮಾಡಿಕೊಂಡಿದ್ದೆ. ಆದರೆ, ಪಕ್ಕದ ತೋಟದ ವ್ಯಕ್ತಿ ಹೆಸ್ಕಾಂಗೆ ಈ ಬಗ್ಗೆ ದೂರನ್ನು ನೀಡಿದ್ದಾರೆ. ದೂರನ್ನು ಆಧರಿಸಿ ಬಂದ ಹೆಸ್ಕಾಂ ಅಧಿಕಾರಿಗಳು ನೋಟಿಸ್ ನೀಡದೇ, ವಿಚಾರಣೆ ಮಾಡದೇ ನನ್ನ ತೋಟದಲ್ಲಿದ್ದ ಸರ್ವೀಸ್ ವೈಯರ್ ಹಾಗೂ ಸ್ಟಾರ್ಟರ್ ಮಷಿನ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಸದ್ಯ ತೋಟದಲ್ಲಿ ನಾಟಿ ಮಾಡಿರುವ ಕಬ್ಬಿಗೆ ತುರ್ತಾಗಿ ನೀರಿನ ಅವಶ್ಯಕತೆ ಇದೆ. ಹಾಗೆ ಕೃಷಿಯೊಂದಿಗೆ ನಡೆಸಿರುವ ಹೈನುಗಾರಿಕೆಯ 35 ಆಕಳುಗಳಿಗೆ ನೀರಿನ ಸಮಸ್ಯೆ ಉದ್ಭವಿಸಿದೆ. ಹಾಗೇ ಮೀನುಗಳಿಗೆ ನೀರಿನ ಅವಶ್ಯಕತೆ ಇದೆ ಎಂದು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ ಮನವಿ ಮಾನಾಡಿದರೂ, ಪರವಾನಿಗೆ ನೀಡುತ್ತಿಲ್ಲ ಎಂದು ಮಾಜಿ ಸೈನಿಕ ಆರೋಪಿಸಿದರು.