ಗದಗ: ಅಬ್ಬಾ.. ಅಂತೂ ಮಳೆ ಕಡಿಮೆ ಆಯ್ತು. ಪ್ರವಾಹವೂ ಇಳಿಯಿತು. ನಮ್ಮ ಗ್ರಾಮಕ್ಕೆ ಮರಳಿ ಸೂರು ಕಂಡುಕೊಳ್ಳೋಣ ಎಂದು ನಿಟ್ಟುಸಿರು ಬಿಟ್ಟಿದ್ದರು ಹೊಳೆ ಆಲೂರು ಗ್ರಾಮಸ್ಥರು. ಆದರೆ ಇವರ ನೆಮ್ಮದಿಯನ್ನು ಈಗ ನೀರಿನ ಸಮಸ್ಯೆ ಕೆಡಿಸಿದೆ. ಜಲಪ್ರವಾಹದಿಂದ ಕಂಗೆಟ್ಟಿದ್ದ ಜನರು ಕುಡಿಯೋ ನೀರಿಗಾಗಿ ಪರದಾಡುವಂತಾಗಿದೆ.
ಹೌದು, ಇದು ವಿಚಿತ್ರವಾದರೂ ಸತ್ಯ. ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡಗಳನ್ನು ಹಿಡಿದು ಜನ ಹೊಡೆದಾಡಿಕೊಂಡಿದ್ದಾರೆ. ಮಲಪ್ರಭಾ ಪ್ರವಾಹಕ್ಕೆ ಇಡೀ ಗ್ರಾಮವೇ ಮುಳುಗಿ ಹೋಗಿತ್ತು. ಆದರೆ ಈಗ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ ನೆರೆ ಸಂತ್ರಸ್ತರು.
ಕುಡಿಯಲು, ಮನೆ ಬಳಕೆಗೆ ನೀರಿಲ್ಲದಾಗಿದೆ. ಜಾನುವಾರುಗಳು ಸಹ ಕುಡಿಯುವ ನೀರಿಲ್ಲದೇ ಮೂಕರೋದನೆ ಅನುಭವಿಸುತ್ತಿವೆ. ಪ್ರವಾಹ ತಗ್ಗಿದ ಬಳಿಕ ತಾಲೂಕಾಡಳಿತ ಇತ್ತ ತಲೆಹಾಕಿಯೂ ನೋಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಸಂಘ-ಸಂಸ್ಥೆಯವರು ಪೂರೈಸಿದ ಟ್ಯಾಂಕರ್ ನೀರಿಗಾಗಿ ಕೊಡಗಳನ್ನು ಹಿಡಿದು ಸಂತ್ರಸ್ತರು ಹೊಡೆದಾಡಿಕೊಂಡಿದ್ದಾರೆ. ಟ್ಯಾಂಕರ್ಗಳಿಂದ ನೀರು ಪೂರೈಸದ ತಾಲೂಕಾಡಳಿತದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಹ ನಿಂತ ಮೇಲೆ ಸಂತ್ರಸ್ತರ ಗೋಳು ಕೇಳೋರು ಯಾರು ಎಂಬ ಪ್ರಶ್ನೆ ನೆರೆಹಾವಳಿ ಗ್ರಾಮಗಳಲ್ಲಿ ಉದ್ಭವವಾಗಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಇತ್ತ ಗಮನಹರಿಸಿ, ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಲಿ ಅನ್ನೋ ಒತ್ತಾಯ ಕೇಳಿಬಂದಿದೆ.