ಗದಗ : ಕೊರೊನಾ ಮಹಾಮಾರಿ ಸೋಂಕು ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮುಂದುವರೆಸಿದ್ದು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಈ ನಡುವೆಯೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಕೊರೊನಾ ಶಂಕಿತ - ಕಂದಾಯ ನಿರೀಕ್ಷಕ ನಾಪತ್ತೆಯಾಗಿದ್ದರು. ಇದೀಗ ಅವರನ್ನ ಪತ್ತೆಹಚ್ಚುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಜಿಲ್ಲೆಯ ಶಿರಹಟ್ಟಿ ತಹಶೀಲ್ದಾರ್ ಕಚೇರಿಯ ಆರ್.ಐ ಆಗಿರುವ ವ್ಯಕ್ತಿಗೆ ಸೋಂಕು ತಗುಲಿದ ವಿಷಯ ತಿಳಿಯುತ್ತಿದ್ದಂತೆ ಕಂದಾಯ ನಿರೀಕ್ಷಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಊರಿನಿಂದ ಪರಾರಿಯಾಗಿದ್ದ.
ಕಂದಾಯ ನಿರೀಕ್ಷಕನ ಪತ್ತೆಗಾಗಿ ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಹರಸಹಾಸ ಪಟ್ಟಿದ್ದು, ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗೂ ಶೋಧ ಕಾರ್ಯ ನಡೆಸಿದ್ದರು. ನಂತರ ತಡರಾತ್ರಿ ಹುಬ್ಬಳ್ಳಿಯ ಮನೆಯಲ್ಲಿ ಆತ ಪತ್ತೆಯಾಗಿದ್ದಾನೆ. ಸದ್ಯ ಅತನನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು ವಿದ್ಯಾವಂತರೇ ಹೀಗೆ ಮಾಡಿದರೆ ಹೇಗೆ ಅಂತ ಛೀಮಾರಿ ಹಾಕಿದ್ದಾರೆ.
ಇನ್ನು ಕಂದಾಯ ನಿರೀಕ್ಷಕನನ್ನು ನೇರವಾಗಿ ಗದಗ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಾಸಕ ಸೇರಿದಂತೆ ಕೆಲಸ ನಿರ್ವಹಿಸಿದ ಕಚೇರಿಯ ಸಿಬ್ಬಂದಿ ವರ್ಗ ಆತಂಕಕ್ಕೆ ಒಳಗಾಗಿದ್ದಾರೆ. ಲಕ್ಷ್ಮೇಶ್ವರ ಪುರಸಭೆಯಲ್ಲಿ ನಡೆದ ಸಭೆಗೆ ಆರ್ ಐ ಭಾಗಿಯಾಗಿದ್ದರು. ಅದರಲ್ಲಿ ಶಾಸಕ ರಾಮಣ್ಣ ಲಮಾಣಿ, ಎಸಿ ರಾಯಪ್ಪ, ಡಿವೈಎಸ್ ಪಿ ಪ್ರಹ್ಲಾದ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.