ಗದಗ: ಕಳೆದ 16 ವರ್ಷಗಳಿಂದ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಗದಗ ನಗರದ ಇರಾನಿ ಕಾಲೋನಿ ನಿವಾಸಿ ಕುಮಾರಸ್ವಾಮಿ ನಾಗರಾಳ(36) ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.
ಜಮ್ಮುಕಾಶ್ಮೀರ, ಆಸ್ಸಾಂ, ರಾಜಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ಇವರು ಸದ್ಯ ಕೋಲ್ಕತ್ತಾದಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಸೋಮವಾರ ಮನೆಯಿಂದ ಕರ್ತವ್ಯಕ್ಕೆ ತೆರಳುವ ವೇಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಏಟಾಗಿತ್ತು. ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಮಿಲಿಟರಿ ಆಸ್ಪತ್ರೆಯಲ್ಲಿ ಗುಣಮುಖವಾಗದ ಕಾರಣ ನಾಲ್ಕು ದಿನಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸೇನಾ ಸಿಬ್ಬಂದಿ ಇವ್ರನ್ನ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಇವರ ಪಾರ್ಥಿವ ಶರೀರ ವಿಶೇಷ ವಿಮಾನದ ಮೂಲಕ ಬೆಂಗಳೂರು ಮಾರ್ಗವಾಗಿ ನಾಳೆ ಬೆಳಗಿನ ಜಾವ ನಾಲ್ಕು ಗಂಟೆಗೆ ಗದಗ ನಗರಕ್ಕೆ ಬರಲಿದೆ.
ಯೋಧ ಕುಮಾರಸ್ವಾಮಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಸಾಯಿಬಾಬಾ ಮಂದಿರದ ಬಳಿ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ ನಾಲ್ಕು ಗಂಟೆಯಿಂದ ಎಂಟು ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಜಿಲ್ಲಾಡಳಿತದ ವತಿಯಿಂದ ಅವಕಾಶ ಕಲ್ಪಿಸಲಾಗಿದೆ.