ಗದಗ : ಈ ಭಾಗದಲ್ಲಿ ಅನ್ನದಾತರು ಕೆಂಪು ಸುಂದರಿಯನ್ನು ಬೆಳೆದು, ಸಮೃದ್ಧ ಜೀವನ ನಡೆಸ್ತಾಯಿದ್ದರು. ಈ ಬಾರಿ ಮೆಣಸಿನಕಾಯಿ ಬೆಳೆ ಇಳುವರಿ ಭರ್ಜರಿಯಾಗಿ ಬಂದಿದೆ.
ಬೆಲೆ ಸಹ ಆಕರ್ಷಕವಾಗಿಯೇ ಇದೆ. ಬಂದ ಹಣದಲ್ಲಿ ಒಂದು ಮನೆ ಕಟ್ಟಿಸಿ, ತಂಗಿ ಮದುವೆ ಮಾಡಬೇಕು ಅಂತಾ ರೈತ ಅಂದುಕೊಂಡಿದ್ದ. ಆದರೆ, ಅದೇ ರೈತನಿಗೆ ಈಗ ಬರಸಿಡಿಲು ಬಡಿದಂತಾಗಿದೆ.
ಸತತವಾಗಿ ಸುರಿದ ಜಡಿ ಮಳೆಗೆ ಮೆಣಸಿನಕಾಯಿ ಬೆಳೆ ನಾಶವಾಗಿದೆ. ತೇವಾಂಶ ಹೆಚ್ಚಳವಾಗಿ ಮೆಣಸಿನಕಾಯಿ ಬೆಳೆ ರೋಗಕ್ಕೆ ತುತ್ತಾಗುತ್ತಿದೆ. ಹಾಗಾಗಿ, ಅನ್ನದಾತರು ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.
ಮೆಣಸಿನಕಾಯಿ ಬೆಳೆಯಲು ಕೃಷಿ ಇಲಾಖೆ ಉತ್ತೇಜನ : ಒಂದು ಜಿಲ್ಲೆ ಒಂದು ಬೆಳೆ ಎನ್ನುವ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಗದಗ ಜಿಲ್ಲೆ ಆಯ್ಕೆಯಾಗಿತ್ತು. ಗದಗ ಜಿಲ್ಲೆಯ ಮಣ್ಣು ಹಾಗೂ ಇಲ್ಲಿನ ಹವಾಮಾನ ಮೆಣಸಿನಕಾಯಿ ಬೆಳೆ ಬೆಳೆಯಲು ಯೋಗ್ಯವಾಗಿದೆ ಎಂದು ಕೃಷಿ ಇಲಾಖೆಯು ಈ ಬೆಳೆಗೆ ಉತ್ತೇಜನ ನೀಡಿದೆ.
ಹಾಗಾಗಿ, ಜಿಲ್ಲೆಯ ಗದಗ ತಾಲೂಕು ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ, ರೋಣ ಹಾಗೂ ನರಗುಂದ ಭಾಗದಲ್ಲಿ ಅತೀ ಹೆಚ್ಚು ಮೆಣಸಿನಕಾಯಿ ಬೆಳೆಯನ್ನು ರೈತರು ಬೆಳೆದಿದ್ದಾರೆ. ಮೆಣಸಿನಕಾಯಿ ಬೆಳೆ ಸಮೃದ್ಧವಾಗಿ ಬೆಳೆದು ನಿಂತ್ತಿತ್ತು. ಇನ್ನೇನು ಕಟಾವು ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಅನ್ನದಾತರು ಇದ್ದರು. ಆದರೆ, ಅಕಾಲಿಕವಾಗಿ ಸುರಿದ ಮಳೆಯಿಂದ ಮೆಣಸಿನಕಾಯಿ ಬೆಳೆ ನಾಶವಾಗಿದೆ.
ತೇವಾಂಶ ಹೆಚ್ಚಳ, ಮೆಣಸಿನಕಾಯಿ ಬೆಳೆಗೆ 'ಮಚ್ಚೆ'ರೋಗ : ಒಂದು ವಾರದ ಹಿಂದೆ ಸುರಿದ ಮಳೆ ಮತ್ತು ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಮೆಣಸಿನಕಾಯಿ ಗಿಡಗಳು ಭಾಗಶಃ ಹಾನಿಯಾಗಿದ್ದವು. ಈಗ ಮಳೆ ಕಡಿಮೆಯಾಗಿದ್ರು ತೇವಾಂಶ ಹೆಚ್ಚಳವಾಗಿ ಮೆಣಸಿನಕಾಯಿ ಬೆಳೆಗೆ 'ಮಚ್ಚೆ' ರೋಗ ಆವರಿಸಿಕೊಂಡಿದೆ.
ಕೆಂಪು ಬಣ್ಣದ ಮೆಣಸಿನಕಾಯಿ ಕಪ್ಪು ಬಣ್ಣಕ್ಕೆ ತಿರುಗಿ ಹಾನಿಯಾಗುತ್ತಿದೆ. ಇದರಿಂದ ರೈತರು ಕಂಡಿದ್ದ ಕನಸುಗಳೆಲ್ಲವೂ ನುಚ್ಚುನೂರಾಗಿವೆ. ಅಂದಹಾಗೆ, ಮಲ್ಲಸಮುದ್ರದ ಯುವ ರೈತ ಮಂಜುನಾಥ್ ದೊಡ್ಡಮನಿ ಎಂಬುವರು ಮೆಣಸಿನಕಾಯಿ ಬೆಳೆಯ ಹಾನಿಯಿಂದ ಕಂಗಾಲಾಗಿದ್ದಾನೆ. ಈ ಬಾರಿ ತಮ್ಮ ತಂಗಿ ಮದುವೆ ಮಾಡಬೇಕು ಅಂತಾ ಅಂದುಕೊಂಡಿದ್ದರಂತೆ. ಆದರೆ, ಈಗ ಎಲ್ಲಾ ಆಸೆಗಳಿಗೆ ತಣ್ಣೀರೆರಚಿದೆ ಅಂತಾ ಗೋಳಾಡುತ್ತಿದ್ದಾರೆ.
ಅಕಾಲಿಕ ಮಳೆಯಿಂದ ರೈತರ ಬದುಕು ದುಸ್ತರ : ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಭಾಗದಲ್ಲಿ ಮೆಣಸಿನಕಾಯಿ ಬೆಳೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಅದರಲ್ಲೂ ಮಲ್ಲಸಮುದ್ರ, ಹರ್ತಿ, ಕುರ್ತಕೋಟಿ ಭಾಗದಲ್ಲಿ ಮೆಣಸಿನಕಾಯಿ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಸೂಲ ಮಾಡಿ ಒಂದು ಎಕರೆ ಪ್ರದೇಶಕ್ಕೆ 30 ರಿಂದ 45 ಸಾವಿರ ರೂ. ಖರ್ಚು ಮಾಡಿದ್ರು. ಆದರೆ, ಈಗ ಮಳೆ ಹಾಗೂ ತೇವಾಂಶ ಹೆಚ್ಚಳವಾಗಿ ರೋಗ ಆವರಿಸಿದೆ.
ಕಳೆದ ಬಾರಿ ಮೆಣಸಿನಕಾಯಿ ಬೆಳೆದ ರೈತರು ಭರ್ಜರಿ ಲಾಭ ಪಡೆದಿದ್ದರು. ಒಂದು ಕ್ವಿಂಟಲ್ ಮೆಣಸಿನಕಾಯಿ 35 ರಿಂದ 50 ಸಾವಿರದವರಿಗೆ ಮಾರಾಟವಾಗುವುದರೊಂದಿಗೆ ದಾಖಲೆ ಬರೆದಿತ್ತು. ಈ ಬಾರಿ ಉತ್ತಮ ಬೆಲೆ ಬರುತ್ತದೆ ಎಂದು ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬಿತ್ತನೆ ಮಾಡಿದ್ರು. ಆದರೆ, ಅಕಾಲಿಕವಾಗಿ ಸುರಿದ ಮಳೆಯಿಂದ ರೈತರ ಬದುಕು ದುಸ್ತರವಾಗಿದೆ. ಹಾಗಾಗಿ, ಸರ್ಕಾರ ಪರಿಹಾರ ನೀಡಬೇಕು ಎಂದು ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಭಾರಿ ಮಳೆ : ಕೆರೆಯಂತಾದ ರಸ್ತೆ,ಧರೆಗುರುಳಿದ ಮನೆಗಳು