ಗದಗ: ದಶಕದಿಂದ ಬಾಕಿ ಉಳಿಸಿಕೊಂಡಿದ್ದ ಗುತ್ತಿಗೆದಾರನ ಬಿಲ್ ಪಾವತಿಸದ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ ಚರಾಸ್ತಿಯನ್ನು ಜಪ್ತಿ ಮಾಡಲಾಗಿದೆ. 1986-87ರಲ್ಲಿ ಎನ್.ಆರ್.ನಾಯಕ್ ಎಂಬ ಗುತ್ತಿಗೆದಾರರಿಂದ ಕೆರೆ ಕಾಮಗಾರಿ ನಡೆಸಿದ್ದ ಇಲಾಖೆ, ಅವರಿಗೆ ಬಿಲ್ ಪಾವತಿಸದೆ ಮೊಂಡುತನ ಪ್ರದರ್ಶಿಸಿತ್ತು.
ಸುಮಾರು 1 ಕೋಟಿ 15 ಲಕ್ಷ ಮೊತ್ತದಲ್ಲಿ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದ ಕೆರೆ ಕಾಮಗಾರಿ ಮಾಡಿಸಿಕೊಳ್ಳಲಾಗಿತ್ತು. ಇದಾದ ಬಳಿಕ ಅಧಿಕಾರಿಗಳು ಬಿಲ್ ನೀಡಲು ಸತಾಯಿಸಿದ್ದಾರೆ.
ಈ ಹಿನ್ನೆಲೆ ಕಚೇರಿಗೆ ಅಲೆದು ಸುಸ್ತಾಗಿದ್ದ ಗುತ್ತಿಗೆದಾರ ಕೋರ್ಟ್ ಮೆಟ್ಟಿಲೇರಿದ್ದರು. 1991ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಗುತ್ತಿಗೆದಾರರು ಕೊನೆಗೂ ಪ್ರಕರಣದಲ್ಲಿ ಜಯಿಸಿದ್ದಾರೆ. 33 ವರ್ಷಗಳ ಕಾಲ ಸುದೀರ್ಘ ಹೋರಾಟದ ಬಳಿಕ 2020 ಡಿಸೆಂಬರ್ 4ರಂದು ಕೋರ್ಟ್ 2 ಕೋಟಿ 99 ಲಕ್ಷ ರೂ. ನೀಡುವಂತೆ ಇಲಾಖೆಗೆ ಸೂಚಿಸಿತ್ತು.
ಆದರೆ ಸಣ್ಣ ನೀರಾವರಿ ಅಧಿಕಾರಿಗಳು ಮಾತ್ರ ಪೂರ್ಣ ಪ್ರಮಾಣದ ಹಣ ಪಾವತಿ ಮಾಡದೆ, ಮತ್ತೆ ಬಾಕಿ ಉಳಿಸಿಕೊಂಡಿದ್ದರು. ಹಾಗಾಗಿ ಜನವರಿ 13, 2021ರಂದು ಸಣ್ಣ ನೀರಾವರಿ ಇಲಾಖೆ ಜಪ್ತಿಗೆ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿತು. ಈ ಹಿನ್ನೆಲೆ ವಕೀಲರೊಂದಿಗೆ ಸಣ್ಣ ನೀರಾವರಿ ಕಚೇರಿಗೆ ಆಗಮಿಸಿದ ಗುತ್ತಿಗೆದಾರ ಇಡೀ ಕಚೇರಿಯನ್ನೇ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಒಂದು ವಾರದಿಂದ ಕತ್ತಲಲ್ಲಿ ಗದಗ ನಗರಸಭೆ : ಸಾರ್ವಜನಿಕರ ಪರದಾಟ, ಕಚೇರಿ ಸಿಬ್ಬಂದಿ ಬಿಂದಾಸ್ ಓಡಾಟ