ಗದಗ: ಈ ಸಂವತ್ಸರದಲ್ಲಿ ಜಲ ಆಘಾತ ಆಗಿದೆ. ಶ್ರಾವಣ ಮಾಸದ ಕೊನೆಯವರೆಗೂ ಹಾಗೂ ಕಾರ್ತಿಕ ಮಾಸದ ನಡುವೆಯೂ ಆಗಾಗ ಪ್ರವಾಹ ಬರುವ ಸಂಭವವಿದೆ ಎಂದು ಕೋಡಿಮಠದ ಜಗದ್ಗುರು ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಗದಗದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಈ ಸಂವತ್ಸರದಲ್ಲಿ ಜಲ ಆಘಾತ, ಭೂ ಆಘಾತ ಹಾಗೂ ವಾಯು ಆಘಾತದ ಲಕ್ಷಣಗಳು ಇವೆ. ಅದರಲ್ಲಿ ಈಗಾಗಲೇ ಜಲ ಆಘಾತ ಸಂಭವಿಸುತ್ತಿದ್ದು, ಬರುವ ದಿನಗಳಲ್ಲಿ ಭೂ ಕುಸಿತ ಹಾಗೂ ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಧರೆಗುರುಳವ ಸಂಭವವಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಜಗತ್ತೇ ಕೇಳಿ ಕಂಡರಿಯದ ಆಘಾತ ಆಗುವ ಲಕ್ಷಣಗಳಿದ್ದು, ಅದೇನೆಂದು ಮುಂದೆ ಹೇಳುತ್ತೇನೆ ಎಂದರು.
ಮುಂದುವರಿದು ಮಾತನಾಡಿರುವ ಶ್ರೀಗಳು, ಭಾರತ ದೇಶದಲ್ಲಿನ ಸಾಕಷ್ಟು ಮಠಮಾನ್ಯಗಳಿಗೆ ಯೋಗ್ಯವಾದ ವಟುಗಳನ್ನು ತಯಾರಿಸುವ ಹಾಗೂ ಸುಸಜ್ಜಿತ ಧರ್ಮ ಚಿಂತನೆ ಮೂಲಕ ಸನ್ಯಾಸತ್ವ ನೀಡುವ ಕೇಂದ್ರವಾದ ಶಿವಯೋಗ ಮಂದಿರವು ಪ್ರವಾಹದಿಂದ ಮುಳಗಡೆಯಾಗಿದೆ. ಹಾನಗಲ್ ಗುರುಕುಮಾರ ಮಹಾಸ್ವಾಮಿಗಳು ಸ್ಥಾಪಿಸಿದ ಶಿವಯೋಗ ಮಂದಿರವು ನೂರು ವರುಷಕ್ಕೂ ಹೆಚ್ಚು ದಿನಗಳನ್ನು ದಾಟಿದೆ. ಅಂತಹ ಸಂಸ್ಥೆಗೆ ಇಂದು ಪ್ರವಾಹ ಬಂದ ಕಾರಣ ನೂರಾರು ಕೋಟಿ ನಷ್ಟವಾಗಿದ್ದು, ವಟುಗಳ ಪಾಠ ಪ್ರವಚನಕ್ಕೂ ಸಹ ತೊಂದರೆಯಾಗಿದೆ. ಅಲ್ಲದೇ ಭಸ್ಮ ತಯಾರಿಕಾ ಘಟಕವೂ ಮುಳಗಡೆಯಾಗಿದ್ದು, ದಾಸೋಹ ಭವನವೂ ಪ್ರವಾಹಕ್ಕೆ ಸಿಲುಕಿದೆ. ಹೀಗಾಗಿ ಸಾರ್ವಜನಿಕ ಸಂಸ್ಥೆಗೆ ನೀವೆಲ್ಲರೂ ಹೆಚ್ಚಿನ ಒತ್ತು ನೀಡಬೇಕು ಅಂತ ಶ್ರೀಗಳು ಹೇಳಿದರು.