ಗದಗ: ಇಂಗ್ಲಿಷ್ ಮೆಡಿಸಿನ್ಗಳ ಮಧ್ಯೆ ಆಯುರ್ವೇದ ಇನ್ನಿಲ್ಲದಂತಾಗುವ ಸ್ಥಿತಿ ತಲುಪುತ್ತಿದೆ. ಇಲ್ಲೊಬ್ಬ ನಾಟಿ ವೈದ್ಯರು ಅಪರೂಪದ ಆಯುರ್ವೇದ ಸಸ್ಯಗಳ ಕೈತೋಟ ಮಾಡಿಕೊಂಡಿದ್ದಾರೆ. ಅವರು ಜೋಪಾನ ಮಾಡ್ತಿರುವ ಕೈತೋಟವು ಈಗ ಮನೆ ಮಾತಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಇದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಚನ್ನವೀರಪ್ಪ ಕೊಂಚಿಗೇರಿ ಅವರ ಕೈತೋಟ. ಚನ್ನವೀರಪ್ಪ ಕೊಂಚಿಗೇರಿ ತಮ್ಮ ಮೂರೂವರೆ ಗುಂಟೆ ಜಾಗದಲ್ಲಿ ಆಯುರ್ವೇದ ಸಸ್ಯಗಳ ಅದ್ಭುತ ಕೈತೋಟವನ್ನು ನಿರ್ಮಿಸಿದ್ದಾರೆ. ಅದರಲ್ಲಿ ಹುಳಿಸೊಪ್ಪ, ಸೀತಾ ಅಶೋಕ, ಭೂ ಆಮ್ಲ, ನಾವಳ್ಳಿ, ನಕ್ರಿ, ಲೊಬಾನಾ, ಬೆಟ್ಟತಾವರೆ, ಕೆಂಪು ತ್ರಿಮೂಲ, ನರಕ ತೊಂಡಿ, ಬೊಳಿ ಹಾಲಿವಾಳ, ಕೊಂಪು ಚೊಗಚಿ, ಆಡುಸೋಗೆ ಸೇರಿದಂತೆ 50ಕ್ಕೂ ಹೆಚ್ಚು ಬಗೆಯ ಆಯುರ್ವೇದ ಸಸ್ಯಗಳನ್ನು ಸಂರಕ್ಷಿಸಿದ್ದಾರೆ.
ಅಲ್ಸರ್, ಅಪೆಂಡಿಕ್ಸ್, ಕಿಲುನೋವು, ಸಕ್ಕರೆ ಕಾಯಿಲೆಗೆ ಇಲ್ಲಿದೆ ಶಾಶ್ವತ ಪರಿಹಾರ:
ಕುಟುಂಬ ಪರಂಪರೆಯಿಂದ ಈ ನಾಟಿ ವೈದ್ಯ ಪರಂಪರೆ ಬಳುವಳಿಯಾಗಿ ಅವರಿಗೆ ಬಂದಿದೆಯಂತೆ. ಕಪ್ಪತ್ತಗುಡ್ಡ, ಸಹ್ಯಾದ್ರಿ ಪರ್ವತ ಶ್ರೇಣಿ ಭಾಗ, ದಾಂಡೇಲಿ, ಬೆಂಗಳೂರು, ಸಿದ್ದಾಪುರ ಸೇರಿ ರಾಜ್ಯ ಹಾಗೂ ದೇಶದ ವಿವಿಧ ಭಾಗದಿಂದ ಸಸ್ಯಗಳನ್ನು ಸಂಗ್ರಹಿಸಿದ್ದಾರೆ. ಸುಮಾರು 30 ವರ್ಷದಿಂದ ನಿರಂತರ ಸೇವೆ ಮಾಡ್ತಿರೋ ಇವ್ರು ನಿಸರ್ಗ ಚಿಕಿತ್ಸೆಯಲ್ಲಿ ಪದವಿ ಪಡೆದಿದ್ದಾರೆ. ಸರ್ಕಾರಿ ಉದ್ಯೋಗಕ್ಕಿಂತ ಸ್ವಾವಲಂಬಿ ಬದುಕು ಹಾಗೂ ಜನಸೇವೆ ಮುಖ್ಯ ಅನ್ನೋ ನಂಬಿಕೆ ಇವರದ್ದು. ಇನ್ನು ಈ ಸೇವಾ ಕಾರ್ಯಕ್ಕೆ ಪತ್ನಿ ವೇದಾ, ಪುತ್ರ ಧರ್ಮರಾಜ್ ಹಾಗೂ ಹರ್ಷಾ ಕೂಡ ಸಾಥ್ ನೀಡ್ತಿದ್ದಾರೆ.